ವಿದ್ಯಾರ್ಥಿಗಳು ಮತದಾನದ ಮಹತ್ವ ಅರಿಯಲಿ

KannadaprabhaNewsNetwork |  
Published : Jul 22, 2024, 01:25 AM IST
ಕಾರ್ಯಕ್ರಮವನ್ನು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಭವಿಷ್ಯದಲ್ಲಿ ಸಮರ್ಥ ಮತದಾರರನ್ನಾಗಿ ಪರಿವರ್ತಿಸುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಶ್ರಮ ಶ್ಲಾಘನೀಯ

ಗದಗ: ಸಾರ್ವತ್ರಿಕ ಚುನಾವಣೆ ಹಾಗೂ ಸರ್ಕಾರ ರಚನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅಣಕು ಸಂಸತ್ತು ರಚನೆ ಶಾಲೆಯಲ್ಲಿ ಪರಿಚಯಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲೇ ವಿದ್ಯಾರ್ಥಿಗಳು ತಮ್ಮ ಪ್ರತಿನಿಧಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಿ ಪ್ರಜಾಪ್ರಭುತ್ವ ಹಾಗೂ ಮತದಾನ ಪದ್ಧತಿಯ ಮಹತ್ವ ಅರಿಯಬೇಕು ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.

ಅವರು ನಗರದ ಜ.ತೋಂಟದಾರ್ಯ ಕನ್ನಡ ಹಾಗೂ ಆಂಗ್ಲಮಾಧ್ಯಮ ಪ್ರಾಥಮಿಕ-ಪ್ರೌಢಶಾಲೆಯಲ್ಲಿ ಜರುಗಿದ ಶಾಲಾ ಸಂಸತ್ತು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯುನ್ಮಾನ ಮತದಾನ, ಚುನಾವಣಾ ಪ್ರಚಾರ, ಕಾರ್ಯದರ್ಶಿಗಳ ಸಮ್ಮುಖದಲ್ಲಿ ಪ್ರಮಾಣ ವಚನ ಹೀಗೆ ಸಾರ್ವತ್ರಿಕ ಚುನಾವಣೆಗಳ ವ್ಯವಸ್ಥೆಗಳನ್ನು ಯಥಾವತ್ತಾಗಿ ಈ ಶಾಲೆಯಲ್ಲಿ ಅನುಸರಿಸಿದ್ದು, ಈ ರೀತಿ ಅಚ್ಚುಕಟ್ಟಾದ ಶಾಲಾ ಸಂಸತ್ತು ಪ್ರಕ್ರಿಯೆ ಮಕ್ಕಳಿಂದ ನಡೆಸಿದ್ದು ಶ್ಲಾಘನೀಯ. ಮಕ್ಕಳಲ್ಲಿ ಚುನಾವಣೆಯ ಪರಿಪೂರ್ಣ ಅರಿವನ್ನು ಮೂಡಿಸಿ ಅವರನ್ನು ಭವಿಷ್ಯದಲ್ಲಿ ಸಮರ್ಥ ಮತದಾರರನ್ನಾಗಿ ಪರಿವರ್ತಿಸುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಶ್ರಮ ಶ್ಲಾಘನೀಯವಾಗಿದೆ ಎಂದರು.

ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಲಾಗುತ್ತಿದ್ದು, ಲಿಂ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಆಶಯಗಳಿಗೆ ಅನುಗುಣವಾಗಿ ಈ ಶಾಲೆ ಕಾರ್ಯನಿರ್ವಹಿಸುತ್ತಿದೆ. ಪ್ರಜಾಪ್ರಭುತ್ವದ ಆಶಯಗಳು 12ನೇ ಶತಮಾನದ ಬಸವೇಶ್ವರರ ವಚನಗಳಲ್ಲಿ ವ್ಯಕ್ತವಾಗಿವೆ. ಬಸವಾದಿ ಶರಣರ ವಚನಗಳಲ್ಲಿ ಸಂವಿಧಾನದ ಅಂಶಗಳು ಅಡಕವಾಗಿದ್ದು, ಮಕ್ಕಳು ಸಂವಿಧಾನದ ಮಹತ್ವ ತಿಳಿದುಕೊಳ್ಳಬೇಕು ಎಂದರು.

ಜೆ.ಡಿ. ದಾಸರ ಮಾತನಾಡಿ, ಓದು-ಬರಹದಲ್ಲಿ ನೂರಕ್ಕೆ ನೂರರಷ್ಟು ಅಂಕ ಗಳಿಸಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳದಿದ್ದರೆ ಅಂಥ ಓದು ವ್ಯರ್ಥವಾಗುತ್ತದೆ. ಏನಾದರೂ ಆಗು ಮೊದಲು ಮಾನವನಾಗು ಎಂಬ ರಾಷ್ಟ್ರಕವಿ ಕುವೆಂಪುವರ ಮಾತಿನಂತೆ ಮಕ್ಕಳಲ್ಲಿ ಮಾನವೀಯತೆ ಮೈದಾಳಬೇಕಿದ್ದು, ತೋಂಟದಾರ್ಯ ಶಾಲೆ ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸುತ್ತಿದೆ ಎಂದರು.

ಈ ವೇಳೆ ಅಧ್ಯಕ್ಷತೆ ವಹಿಸಿದ್ದ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಚೇರಮನ್ನ ಎಸ್.ಎಸ್.ಪಟ್ಟಣಶೆಟ್ಟಿ ಹಾಗೂ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ ಮಾತನಾಡಿದರು.

ತೋಂಟದಾರ್ಯ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಅಮರೇಶ ಅಂಗಡಿ, ಶೇಖಣ್ಣ ಕಳಸಾಪೂರ, ಲಿಂಗರಾಜಗೌಡ ಪಾಟೀಲ ಹಾಗೂ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಮತದಾನದ ಮೂಲಕ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ತಮ್ಮ ಖಾತೆಗೆ ಅನುಗುಣವಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಎಲ್.ಕೆ.ಜಿ ಹಾಗೂ ಯು.ಕೆ.ಜಿ ಮಕ್ಕಳಿಗೆ ಅಕ್ಷರಾಭ್ಯಾಸ ಜರುಗಿತು. ಪ್ರೌಢಶಾಲೆ ವಿದ್ಯಾರ್ಥಿಗಳು ವಚನ ನೃತ್ಯ ಪ್ರದರ್ಶಿಸಿದರು. ಸುರೇಖಾ ಕುಂಬಾರಗೇರಿಮಠ ನಿರೂಪಿಸಿದರು. ಸುಧಾ ಅವರಾದಿ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ