ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಬೆಂಗಳೂರು ಮೈಸೂರು ಪಾದಯಾತ್ರೆಗೆ ಚಳ್ಳಕೆರೆ ಕ್ಷೇತ್ರದಿಂದ ಸುಮಾರು 500ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಮುಖಂಡರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಭಾನುವಾರ ಬಿಡದಿಗೆ ತೆರಳಿ ಪಾದಯಾತ್ರೆಯಲ್ಲಿ ಭಾಗವಹಿಸಿದರು.ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 2023ರ ಅವಧಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ ಸಿಎಂ ಸಿದ್ದರಾಮಯ್ಯನವರು ಈಗ ತಾವೇ ಆರೋಪಿದ ಸುಳಿಯಲ್ಲಿ ಸಿಲುಕ್ಕಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡ ಉದಾಹರಣೆ ಇಲ್ಲ. ಸರ್ಕಾರದ ಸಚಿವರೊಬ್ಬರು ಈಗ ಜೈಲಿನಲ್ಲಿದ್ದು ಅವರೇ ಈ ಹಣವನ್ನು ಆಂಧ್ರಪ್ರದೇಶದ ಚುನಾವಣೆಗೆ ಬಳಕೆಯಾಗಿರುವುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ. ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರ ಕಲ್ಯಾಣಕ್ಕೆ ಆದ್ಯತೆ ನೀಡುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಹಾಗೂ ಅವರ ಸರ್ಕಾರ ಸಾವಿರಾರು ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದೆ. ಈ ಹಗರಣಗಳಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇಡೀ ಸರ್ಕಾರವೇ ಆರೋಪದ ಸ್ಥಾನದಲ್ಲಿ ನಿಂತಿದೆ. ಮುಖ್ಯಮಂತ್ರಿ ರಾಜೀನಾಮೆ ನೀಡದ ಹೊರತು ಪಾದಯಾತ್ರೆ ಮೊಟಕುಗೊಳಿಸುವುದಿಲ್ಲ ಎಂದು ತಿಳಿಸಿದರು.ಚಳ್ಳಕೆರೆ ತಾಲೂಕಿನಿಂದ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ದಿನದಿಂದ ದಿನಕ್ಕೆ ಜೆಡಿಎಸ್, ಬಿಜೆಪಿ ಮೈತ್ರಿಕೂಟದ ಪಾದಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿನಿತ್ಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಡೀ ಸರ್ಕಾರವೇ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಆದ್ದರಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ಮುಂದುವರೆಸಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ನಾಯಕನಹಟ್ಟಿ-ತಳಕು ಬಿಜೆಪಿ ಮಂಡಲಾಧ್ಯಕ್ಷ ಈ.ರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಚನ್ನಗಾನಹಳ್ಳಿ ಮಲ್ಲೇಶ್, ಮೊಳಕಾಲ್ಮುರು ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಕರೀಕೆರೆ ತಿಪ್ಪೇಸ್ವಾಮಿ, ಟಿ.ಮಂಜುನಾಥ, ಮಾರುತಿ, ಟಿ.ತಿಮ್ಮಪ್ಪ ಮುಂತಾದವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.