ದಲಿತರ ಆಸ್ತಿ ವಿಚಾರದಲ್ಲಿ ಇರುವ ಸಮಸ್ಯೆ ತಾಲೂಕು ಆಡಳಿತ ಬಗೆಹರಿಸಲಿ: ಮುಖಂಡರ ಆಗ್ರಹ

KannadaprabhaNewsNetwork |  
Published : Jul 23, 2025, 01:45 AM IST
22ಕೆಎಂಎನ್ ಡಿ17 | Kannada Prabha

ಸಾರಾಂಶ

ಮಳವಳ್ಳಿ ತಾಲೂಕಿನಲ್ಲಿ ದಲಿತರ ನಿವೇಶನ, ಕೃಷಿ ಭೂಮಿ, ಸ್ಮಶಾನ, ರಸ್ತೆಗಳ, ಓಣಿ ಒತ್ತುವರಿ ಮಾಡಿಕೊಂಡು ತೊಂದರೆ ನೀಡುವ ಪ್ರಕರಣಗಳು ಸಾಕಷ್ಟಿದೆ. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವೆಡೆ ದೌರ್ಜನ್ಯ ಸಹ ನಡೆಯುತ್ತಿವೆ. ತಾಲೂಕು ಆಡಳಿತ ತ್ವರಿತ ರೀತಿಯ ಕ್ರಮ ವಹಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನಲ್ಲಿ ದಲಿತರ ಆಸ್ತಿ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಕೊಟ್ಟಿರುವ ಜಮೀನುಗಳಿಗೆ ಕೆಲವು ಅಧಿಕಾರಿಗಳ ಕುಮ್ಮಕ್ಕಿನಿಂದ ಸುಳ್ಳು ದಾಖಲೆ ಸೃಷ್ಟಿಸಿಕೊಂಡು ದಲಿತರ ಆಸ್ತಿ ಕಬಳಿಸುತ್ತಿದ್ದಾರೆ. ಹೈಕೋರ್ಟ್ ವರೆಗೆ ದಲಿತರನ್ನು ಅನಗತ್ಯವಾಗಿ ಆಲಿಯುವಂತೆ ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ದಲಿತರ ನಿವೇಶನ, ಕೃಷಿ ಭೂಮಿ, ಸ್ಮಶಾನ, ರಸ್ತೆಗಳ, ಓಣಿ ಒತ್ತುವರಿ ಮಾಡಿಕೊಂಡು ತೊಂದರೆ ನೀಡುವ ಪ್ರಕರಣಗಳು ಸಾಕಷ್ಟಿದೆ. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವೆಡೆ ದೌರ್ಜನ್ಯ ಸಹ ನಡೆಯುತ್ತಿವೆ. ತಾಲೂಕು ಆಡಳಿತ ತ್ವರಿತ ರೀತಿಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಪೇಟೆ ವೃತ್ತದ ಬಳಿ ಜನ ಮೂತ್ರ ವಿಸರ್ಜನೆ ಮಾಡುವ ಸ್ಥಳದಲ್ಲೇ ಅಂಬೇಡ್ಕರ್ ರಸ್ತೆ ಎಂಬ ಚಿತ್ರವಿರುವ ಫಲಕ ಹಾಕಿ ಪುರಸಭೆಯವರು ಸಂವಿಧಾನ ಶಿಲ್ಪಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಮುಖಂಡ ನಡುಕಲಪುರ ಮಂಜು ದೂರಿ ತಕ್ಷಣ ಕ್ರಮ ವಹಿಸುವಂತೆ ಸೂಚಿಸಿದರು.

ತಹಸೀಲ್ದಾರ್ ಎಸ್.ವಿ.ಲೋಕೇಶ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆ ಸಭೆ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜನರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಡಿ ಕರ್ತವ್ಯ ನಿರ್ವಹಿಸಬೇಕು. ಕಳೆದ ಬಾರಿ ಸಭೆಯಲ್ಲಿ ಚರ್ಚೆಯಾದ ಕೆಲ ಸಮಸ್ಯೆಗಳನ್ನು ಆಯಾ ಇಲಾಖೆ ಅಧಿಕಾರಿಗಳು ಬಗೆಹರಿಸಿದ್ದಾರೆ. ಸಭೆಯಲ್ಲಿ ಮಂಡಿಸಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ತಾಲೂಕಿನ ಹಿಟ್ಟಿನಹಳ್ಳಿಕೊಪ್ಪಲು ಗ್ರಾಮದಲ್ಲಿ ದಲಿತರ ಬಡಾವಣೆಗೆ ಹೋಗುವ ಮುಖ್ಯರಸ್ತೆಯಲ್ಲಿ ಎಮ್ಮೆ ದನಗಳನ್ನು ಕಟ್ಟಿ ಇಡೀ ರಸ್ತೆ ಗಬ್ಬೆದ್ದು ನಾರುತ್ತಿದೆ. ತೆರವುಗೊಳಿಸಬೇಕೆಂದು ಮುಖಂಡರು ಸಭೆಯ ಗಮನಕ್ಕೆ ತಂದರು. ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ಮಾತನಾಡಿ, ಘಟನೆ ಸಂಬಂಧ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಪಂಚಾಯ್ತಿ ವತಿಯಿಂದ ತೆರವು ಕಾರ್ಯಾಚರಣೆ ಮಾಡಿದರೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದರು.

ಸಭೆಯಲ್ಲಿ ತಾಪಂ ಇಒ ಶ್ರೀನಿವಾಸ್, ಪುರಸಭಾಧ್ಯಕ್ಷ ಪುಟ್ಟಸ್ವಾಮಿ, ಮುಖ್ಯಾಧಿಕಾರಿ ನಾಗರತ್ನ, ಸಮಾಜ ಕಲ್ಯಾಣಾಧಿಕಾರಿ ಸಂತೋಷ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಮಹೇಶ್, ರವಿಕುಮಾರ್ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''