ಕನ್ನಡಪ್ರಭ ವಾರ್ತೆ ಚಿತ್ರದುರ್ಗ ವಿಶ್ವಗುರು ಬಸವಣ್ಣನವರ ವಿಚಾರಗಳು ಪ್ರತಿ ಮನೆ ಮನ ತಲುಪಬೇಕು. ಈ ವಿಚಾರದಲ್ಲಿ ಅಗತ್ಯವಿರುವ ಎಲ್ಲ ಮಾರ್ಗಗಳ ಅನುಸರಿಸೋಣವೆಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ದಾವಣಗೆರೆ ವಿರಕ್ತ ಮಠದ ಪೀಠಾಧಿಪತಿ ಮೃತ್ಯುಂಜಯ ಅಪ್ಪಗಳು ಹಾಗೂ ಅವರೊಂದಿಗೆ ಹೆಗಲಾಗಿದ್ದ ಹರ್ಡೇಕರ್ ಮಂಜಪ್ಪನವರು ಬಸವ ಜಯಂತಿ ಆಚರಣೆಯ ಪ್ರವರ್ತಕರು. ಬಸವಣ್ಣನವರ ಸಾಧನೆಯ ವಿವಿಧ ಆಯಾಮಗಳ ಬಗ್ಗೆ ಗಮನಹರಿಸಿ ಅಂದು ಜಯಂತಿ ಆಚರಣೆ ಆರಂಭಿಸದೇ ಹೋಗಿದ್ದರೆ ಎಷ್ಟೋ ಜನರಿಗೆ ಇಂದು ಬಸವಣ್ಣನವರು ಅರ್ಥವಾಗಿರುತ್ತಿರಲಿಲ್ಲ, ಅವರ ವಿಚಾರಗಳೇ ತಿಳಿಯುತ್ತಿರಲಿಲ್ಲ. ಇದಕ್ಕೆ ಮತ್ತಷ್ಟು ಹೆಗಲೆಣೆಯಾಗಿ ವಚನ ಸಾಹಿತ್ಯ ಜನಮಾನಸಕ್ಕೆ ತಲುಪುವಂತಾಗಲು ತಮ್ಮ ಮನೆ ಮಠ ಕಳೆದುಕೊಂಡು ಕೆಲಸ ಮಾಡಿದವರು ವಚನ ಪಿತಾಮಹ ಎಂದು ಹೆಸರಾಗಿದ್ದ ಫ.ಗು.ಹಳಕಟ್ಟಿ ಎಂದು ಬಣ್ಣಿಸಿದರು.
ಕಳೆದ 111 ವರ್ಷಗಳ ಹಿಂದೆ ಪ್ರಥಮ ಬಾರಿಗೆ ಬಸವ ಜಯಂತಿ ಸಮಾರಂಭವನ್ನು ದಾವಣಗೆರೆ ವಿರಕ್ತ ಮಠದಲ್ಲಿ ಆಚರಣೆಗೆ ಚಾಲನೆ ನೀಡಲಾಯಿತು. ಅದರಂತೆ ಈ ಬಾರಿಯೂ ಶ್ರೀ ಮಠದಲ್ಲಿ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆಸಲು ಬಸವ ಕೇಂದ್ರಗಳು, ಭಕ್ತಾದಿಗಳು, ಧಾರ್ಮಿಕ ಮುಖಂಡರು, ಮುಖ್ಯವಾಗಿ ಎಸ್‌ಜೆಎಂ ವಿದ್ಯಾಪೀಠದ ನೌಕರ ವರ್ಗದವರ ಸೇವೆ ಕಾರಣವಾಗಿದೆ ಎಂದರು.ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಮಾತನಾಡಿ, ಬಸವೇಶ್ವರ ಜಯಂತಿ ಮೇ 8, 9 ಮತ್ತು 10ರಂದು ಮೂರು ದಿನ ಆಚರಿಸಲು ತೀರ್ಮಾನಿಸಲಾಗಿದೆ. ಎಸ್‌ಜೆಎಂ ವಿದ್ಯಾಪೀಠದಡಿಯಲ್ಲಿ ಬರುವ ಎಲ್ಲ ಶಾಲಾ-ಕಾಲೇಜುಗಳು, ಹಾಸ್ಟೆಲ್‍ಗಳ ಮುಖ್ಯಸ್ಥರು, ನೌಕರವರ್ಗದವರು ಸಂಪೂರ್ಣವಾಗಿ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಎಂದರು.