ಕನ್ನಡಪ್ರಭ ವಾರ್ತೆ ಚಾಮರಾಜನಗರ ರಾಜ್ಯ ಸರ್ಕಾರದ ದಲಿತ ಸಚಿವರಾದ ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಅವರು ದಲಿತರ ಹಿತ ಕಾಯುವ ಸಚಿವರಲ್ಲ ಅವರು ಸಿಎಂ ಸಿದ್ದರಾಮಯ್ಯ ಅವರ ಹಿತ ಕಾಯುವ ಸಚಿವರು ಪುಕ್ಕಲು ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮೂಡ್ನಾಕೂಡು ಒತ್ತಾಯಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೃತ್ತ ಐಎಎಸ್ ಅಧಿಕಾರಿ, ನಟ ಕೆ.ಶಿವರಾಂ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸದೇ ರಾಜ್ಯ ಸರ್ಕಾರ ದಲಿತರಿಗೆ ಅಪಮಾನ ಮಾಡಿದೆ. ರಾಜ್ಯ ಸರ್ಕಾರದಲ್ಲಿರುವ ಮೂರು ಮಂದಿ ದಲಿತ ಸಚಿವರು ದಲಿತ ಸಮುದಾಯದ ನಿವೃತ್ತ ಅಧಿಕಾರಿ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಎಸ್‌ಇಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ. ಇದರಿಂದ ನಿಗಮಗಳಲ್ಲಿ ಸಾಲಸೌಲಭ್ಯಗಳು ಕಡಿಮೆಯಾಗಿದೆ. ಭೂ ಒಡೆತನ ಯೋಜನೆಗೆ ಒಂದು ರೂಪಾಯಿ ಇಲ್ಲ. ಜಮೀನು ತೆಗೆದುಕೊಡಲು ಅನುದಾನ ಇಲ್ಲ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್ ಕೊರೆಸಲು ಹಣ ಇಲ್ಲ. ಐರಾವತ ಯೋಜನೆಗಳಿಗೆ ಹಣ ಇಲ್ಲ. ಒಂದು, ಎರಡು ಫಲಾನುಭವಿಗೆ ಸಾಲಸೌಲಭ್ಯ ಸಿಗುತ್ತಿದೆ. ಸಿದ್ದರಾಮಯ್ಯ ತಮ್ಮ ಸಮುದಾಯದ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಿಕೊಳ್ಳುವ ಸಲುವಾಗಿ ದಲಿತರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದು ದೂರಿದರು.ಕೆ.ಶಿವರಾಂ ಹಾಗೂ ದಲಿತ ಸಮುದಾದವರ ಮೇಲೆ ಗೌರವ ಇದ್ದರೆ ರಾಜ್ಯದಲ್ಲಿ ಕನ್ನಡ ನಾಡು, ನುಡಿಗೆ ಹೋರಾಟದ ಮಾಡಿದವರಿಗೆ ಕೆ.ಶಿವರಾಂ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಗೌರವ ಉಳಿಸಿಕೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಗರಪುರ ರೇವಣ್ಣ, ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡಹಳ್ಳಿಮೂರ್ತಿ, ಮಾಧ್ಯಮ್ ಸಹಪ್ರಮುಖ್ ಅಶ್ವಿನ್, ಮುಖಂಡ ಭಾನುಪ್ರಕಾಶ್ ಹಾಜರಿದ್ದರು.