ಕಸ್ತೂರಿ ರಂಗನ್‌ ವಿರುದ್ಧ ಗ್ರಾಮಸ್ಥರು ಒಗ್ಗಟ್ಟಾಗಿ ಹೋರಾಡೋಣ: ಎಂ.ಸಿ.ನಾಗೇಶ್‌ ಕರೆ

KannadaprabhaNewsNetwork | Published : Oct 2, 2024 1:25 AM

ಸಾರಾಂಶ

ನರಸಿಂಹರಾಜಪುರ, ಕಸ್ತೂರಿ ರಂಗನ್ ವರದಿ ವಿರುದ್ಧ ರೈತರು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಕಾನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಸಿ.ನಾಗೇಶ್ ಕರೆ ನೀಡಿದರು.

- ಕಾನೂರು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ। ಗ್ರಾಮ ಮಟ್ಟದಲ್ಲಿ ಹೋರಾಟ ಸಮಿತಿ ರಚನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಸ್ತೂರಿ ರಂಗನ್ ವರದಿ ವಿರುದ್ಧ ರೈತರು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಕಾನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಸಿ.ನಾಗೇಶ್ ಕರೆ ನೀಡಿದರು.

ಸೋಮವಾರ ಕಾನೂರು ಗ್ರಾಮ ಪಂಚಾಯಿತಿಯಲ್ಲಿ ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ಕರೆದಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ, ಯಾವ ಮಾನದಂಡ ಇಟ್ಟುಕೊಂಡು ಡೀಮ್ಡ್ ಫಾರೆಸ್ಟ್, ಸೆಕ್ಷನ್-4 ಹಾಗೂ ಕಸ್ತೂರಿ ರಂಗನ್ ವರದಿ ತಯಾರಿಸಲಾಗಿದೆ ಎಂಬುದನ್ನು ಅಧಿಕಾರಿಗಳು ಸಭೆಗೆ ತಿಳಿಸಬೇಕು. ಮುಂದೆ ಇನ್ನೊಂದು ವಿಶೇಷ ಗ್ರಾಮ ಸಭೆ ಕರೆಯೋಣ. ಆ ಸಭೆಗೆ ತರೀಕೆರೆ ಉಪ ವಿಭಾಗಾ ಧಿಕಾರಿ, ನ.ರಾ.ಪುರ ತಹಸೀಲ್ದಾರ್ ಹಾಗೂ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಆಗಮಿಸಿ ಈ ಬಗ್ಗೆ ಗ್ರಾಮಸ್ಥರಿಗೆ ವಿವರಣೆ ಕೊಡಬೇಕು. ಒಂದು ವೇಳೆ ದಿನ ಸಭೆಗೆ ಅಧಿಕಾರಿಗಳು ಬಾರದಿದ್ದರೆ ತಾಲೂಕು ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಸ್ತೂರಿ ರಂಗನ್ ವರದಿ ವಿರುದ್ಧ ಗ್ರಾಮ ಪಂಚಾಯಿತಿಯಿಂದ ಹಾಗೂ ವೈಯ್ಯಕ್ತಿಕವಾಗಿಯೂ ಆಕ್ಷೇಪಣೆ ಸಲ್ಲಿಸಬೇಕು ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಕಾನೂರು ಗ್ರಾಪಂ ಅಧ್ಯಕ್ಷ ರತ್ನಾಕರ್ ಮಾತನಾಡಿ, ಕಸ್ತೂರಿ ರಂಗನ್ ವರದಿ ವಿರೋಧಿಸಿ ಗ್ರಾಮ ಪಂಚಾಯಿತಿಯಿಂದ ಆಕ್ಷೇಪಣೆ ಸಲ್ಲಿಸೋಣ. ಎಲ್ಲಾ ಗ್ರಾಮಸ್ಥರು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಸಂಬಂಧಪಟ್ಟ ಗ್ರಾಮವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗುವುದಿಲ್ಲ. ಈಗಾಗಲೇ ಅರಣ್ಯ ಕಾನೂನು ಇದ್ದು ಕಸ್ತೂರಿ ರಂಗನ್ ವರದಿ ಜಾರಿಗೆ ತರುವುದು ಬೇಡ ಎಂದರು. ಗ್ರಾಮ ಪಂಚಾಯಿತಿ ಸದಸ್ಯ ಮನೋಹರ್ ಮಾತನಾಡಿ, ರೈತರಿಗೆ ಮಾರಕವಾದ ಕಸ್ತೂರಿ ರಂಗನ್ ವರದಿ, 4-1 ನೋಟಿಫಿಕೇಶನ್ ವಿರುದ್ಧ ಹೋರಾಟ ರೂಪಿಸೋಣ ಎಂದರು. ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್ ವಿಶೇಷ ಗ್ರಾಮ ಸಭೆ ಕರೆದಿರುವ ಉದ್ದೇಶದ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರತ್ನ,ಶಿವಮೂರ್ತಿ, ಸವಿತ, ಜಯಲಕ್ಷ್ಮಿ, ವಿಜಯಕುಮಾರ್ ಇದ್ದರು. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಮುಂದಿನ ಹೋರಾಟ ರೂಪಿಸಲು ಕಾನೂರು ಗ್ರಾಮ ಪಂಚಾಯಿತಿ ಮಟ್ಟದ ಹೋರಾಟ ಸಮಿತಿ ರಚನೆ ಮಾಡಲಾಯಿತು. ಸಮಿತಿ ಅಧ್ಯಕ್ಷರಾಗಿ ಎಂ.ಸಿ.ನಾಗೇಶ್, ಉಪಾಧ್ಯಕ್ಷರಾಗಿ ಸಂದೇಶ್, ಕಾರ್ಯದರ್ಶಿಯಾಗಿ ರತ್ನಾಕರ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರತಿ ಗ್ರಾಮಕ್ಕೆ 6 ಜನರಂತೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

Share this article