ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಅವರು ಬಸವಕಲ್ಯಾಣದ 25ನೇ ಕಲ್ಯಾಣ ಪರ್ವ ರಜತ ಮಹೋತ್ಸವದಲ್ಲಿ ಮಾತನಾಡಿ, ಲಿಂಗೈಕ್ಯ ಡಾ. ಮಾತೆ ಮಹಾದೇವಿಯವರ ನೇತೃತ್ವದಲ್ಲಿ 2001ರಲ್ಲಿ ಆರಂಭವಾದ ಈ ಕಲ್ಯಾಣ ಪರ್ವವು ಇಂದು 25ನೇ ವರ್ಷಕ್ಕೆ ಕಾಲಿಟ್ಟು ರಜತ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಸಾರುವ ಈ ಕಲ್ಯಾಣ ಪರ್ವವು ಲಿಂಗೈಕ್ಯ ಮಾತೆಯವರ ಕನಸಾಗಿತ್ತು, ಆ ಕನಸು ಇಂದು ನನಸಾಗಿದೆ ಎಂದರು.
ಜಾತಿ, ವರ್ಗ, ಲಿಂಗದ ಭೇದಗಳನ್ನು ಮೀರಿ ಸಮಾನತೆ ಸಾರಿದ ಬಸವಣ್ಣನವರ ಕ್ರಾಂತಿಕಾರಿ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣನ ವಿಚಾರಧಾರೆಗಳನ್ನು ನಮ್ಮ ಸರ್ಕಾರವೂ ಅಳವಡಿಸಿಕೊಂಡು ಕೆಲಸ ಮಾಡುತ್ತಿದೆ ಎಂದು ಹೇಳಿದರು.ಬಸವಣ್ಣನವರ ಅನುಭವ ಮಂಟಪದ ಮುಖಾಂತರ 770 ಅಮರಗಣಂಗಳು ಸೇರಿ ಲಿಂಗಾಯತ ಧರ್ಮ ಸ್ಥಾಪಿಸಿದರು. ಈ ಕುರಿತು 1871, 1881, ಬ್ರಿಟೀಷರ ಕಾಲದ ಜನಗಣತಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ನಮೂದಾಗಿ. 1964ರಲ್ಲಿ ಸಿಖ್ ಧರ್ಮ ಮತ್ತು 2014ರಲ್ಲಿ ಜೈನ ಧರ್ಮಕ್ಕೆ ಮಾನ್ಯತೆ ಕೊಟ್ಟಂತೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕೇ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ದೇಶದಲ್ಲಿ ಸುಮಾರು 8 ರಾಜ್ಯಗಳಲ್ಲಿ 1200 ಬಸವದಳ ಶಾಖೆಗಳನ್ನು ಸ್ಥಾಪಿಸಿ, ರಾಷ್ಟ್ರೀಯ ಬಸವ ದಳವು ಬಸವ ಧರ್ಮದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದ ಅವರು, ಬಸವಣ್ಣನವರ ಈ ಕ್ರಾಂತಿ ಇಡೀ ವಿಶ್ವಕ್ಕೆ ಯಾಕೆ ತಲುಪಿಲ್ಲ ಎನ್ನುವುದು ದೊಡ್ಡ ಪ್ರಶ್ನೆ. ಬಸವಣ್ಣನವರ ವಿಚಾರ ಇಡೀ ವಿಶ್ವಕ್ಕೆ ಹೋಗಬೇಕಿತ್ತು. ಯಾವ ಶಕ್ತಿ ನಮ್ಮನ್ನು ನಿಯಂತ್ರಣ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಡಾ. ಗಂಗಾಮಾತೆ ಅವರು ಮಾತನಾಡಿ, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸ್ಥಾಪಿತವಾಗುತ್ತಿರುವ 112 ಅಡಿ ಬಸವ ಪ್ರತಿಮೆ ಕಾರ್ಯಕ್ಕೆ ಬೇಕಾಗಿರುವ 3ಕೋಟಿ ರು.ಗಳ ಸಂಗ್ರಹ ಮಾಡಿಕೊಡುವದಾಗಿ ಸಚಿವರು ಸಂಕಲ್ಪ ಮಾಡಿದ್ದಾರೆ ಎಂದರು.