ಮುಂದಿನ ಪೀಳಿಗೆಗೆ ಜನಪದ ಕಲೆ ತಲುಪಿಸುವ ಕೆಲಸವಾಗಲಿ: ಶಾಸಕ ಮಾನೆ

KannadaprabhaNewsNetwork |  
Published : Feb 13, 2024, 12:48 AM IST
೧೧ಎಚ್‌ವಿಆರ್೪- | Kannada Prabha

ಸಾರಾಂಶ

ಇಂದಿನ ಯುವ ಪೀಳಿಗೆ ವಿದ್ಯಾರ್ಜನೆಯ ಜೊತೆಗೆ ಇಂತಹ ಕಲೆಗಳನ್ನು ಕಲಿತು ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಹಾವೇರಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಉಪಯೋಜನೆಯಡಿ ಕರ್ನಾಟಕ ಸಂಭ್ರಮ ೫೦ರ ಕಾರ್ಯಕ್ರಮದ ಗ್ರಾಮೀಣ ಭಾಗದ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಜಾನಪದ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶನಿವಾರ ಸಂಜೆ ಹಾನಗಲ್ಲ ತಾಲೂಕಿನ ಮಾರನಬೀಡ ಗ್ರಾಮದಲ್ಲಿ ನಡೆದ ಜನಪರ ಉತ್ಸವ ಜನಮನ ರಂಜಿಸಿತು.

ಜಾನಪದ ವಾದ್ಯ ಡೋಳ್ಳು ಬಾರಿಸುವ ಮೂಲಕ ಶಾಸಕ ಶ್ರೀನಿವಾಸ ಮಾನೆ ಜನಪರ ಉತ್ಸವ ಉದ್ಘಾಟಿಸಿ ಮಾತನಾಡಿ, ಅನಾದಿ ಕಾಲದಿಂದ ಕಲೆ, ಸಂಸ್ಕೃತಿ, ಸಂಭ್ರಮವನ್ನು ಬಿಂಬಿಸುವ ಜನಪದ ಕಲೆಗಳು ಸರ್ವಕಾಲಕ್ಕೂ ಮನರಂಜನೆ ನೀಡುವುದರ ಜೊತೆಗೆ ನಮ್ಮ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ. ಇಂದಿನ ಯುವ ಪೀಳಿಗೆ ವಿದ್ಯಾರ್ಜನೆಯ ಜೊತೆಗೆ ಇಂತಹ ಕಲೆಗಳನ್ನು ಕಲಿತು ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು. ಜನಪದ ಕಲೆ, ಸಂಗೀತ, ಸಾಹಿತ್ಯ, ನೃತ್ಯವನ್ನು ಉಳಿಸಿ, ನಮ್ಮ ಯುವ ಪೀಳಿಗೆಗೆ ಪರಿಚಯಿಸುವ ಜನಪರ ಉತ್ಸವ ಕಾರ್ಯಕ್ರಮದ ಉದ್ದೇಶ ಶ್ಲಾಘನೀಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಜನಪರ ಉತ್ಸವದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.

ಮಾರನಬೀಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಈರಪ್ಪ ಜಾಡರ, ಉಪಾಧ್ಯಕ್ಷೆ ನಗೀನಾ ಹರವಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ಹನಕನಹಳ್ಳಿ ಸೇರಿದಂತೆ ಪಂಚಾಯಿತಿ ಸದಸ್ಯರು, ಊರಿನ ಗಣ್ಯರು ವೇದಿಕೆಯಲ್ಲಿ ಇದ್ದರು.

ಜನಪರ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಹನಾಯ್ ವಾದನ, ಸಮೂಹ ನೃತ್ಯ, ಜಾನಪದ ಗೀತೆ, ಚೌಡಕಿ ಪದ, ಗೀಗಿ ಪದ, ಡೊಳ್ಳು, ಕರಡಿ ಮಜಲು, ಸಂಪ್ರದಾಯಿಕ ಪದಗಳು, ಹಲಗೆ ವಾದನ, ಜಾನಪದ ನೃತ್ಯ, ಕಂಸಾಳೆ ನೃತ್ಯ,ಸುಗಮ ಸಂಗೀತ ಮತ್ತು ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ನೋಡುಗರ ಮನ ತಣಿಸಿತು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು