ಗದಗ: ಲಕ್ಕುಂಡಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ರಾಜ್ಯ,ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಜನಪದ ಕಲಾವಿದರಿದ್ದು, ಅವರ ಮಾರ್ಗದರ್ಶನದಲ್ಲಿ ಲಕ್ಕುಂಡಿ ಉತ್ಸವದಂತಹ ಕಾರ್ಯಕ್ರಮಗಳಲ್ಲಿ ರಾಜ್ಯಮಟ್ಟದ ಗೀಗೀ ಪದಗಳ ಸ್ಪರ್ಧೆ ಏರ್ಪಡಿಸುವ ಮೂಲಕ ನಶಿಸಿ ಹೋಗುತ್ತಿರುವ ಲಾವಣಿ ಹಾಗೂ ಗೀಗೀ ಪದಗಳ ಕಲೆ ಉತ್ತೇಜಿಸುವ ಕೆಲಸ ಲಕ್ಕುಂಡಿ ಗ್ರಾಪಂ ಜತೆಗೆ ಗ್ರಾಮದ ಸರ್ವರು ಕೈ ಜೋಡಿಸಿ ಮಾಡಬೇಕು ಎಂದು ಹಿರಿಯ ಸಾಂಸ್ಕೃತಿಕ ಚಿಂತಕ ಡಾ.ಜಿ.ಬಿ. ಪಾಟೀಲ ಹೇಳಿದರು.
ಗ್ರಾಪಂ ಅಧ್ಯಕ್ಷ ಕೆಂಚಪ್ಪ ಎಸ್. ಪೂಜಾರ ಮಾತನಾಡಿ, ಜನಪದ ಅಕಾಡೆಮಿ ನಮ್ಮ ಗ್ರಾಮದಲ್ಲಿ ಇಂತಹ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಂತಸದ ಸಂಗತಿ. ಗ್ರಾಮೀಣ ಜನಪದ ಕಲೆಯಲ್ಲಿ ಗೀಗೀ ಪದ ಕಲೆಗೆ ಬಹಳ ಮಹತ್ವ ಇದೆ, ಇಂತಹ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡಲಾಗುವುದು ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಆರ್. ಪೊಲೀಸ್‌ಪಾಟೀಲ ಮಾತನಾಡಿ, ಗ್ರಾಮೀಣ ಜನಪದ ಕಲೆಗಳಲ್ಲಿ ಅತ್ಯಂತ ಜನಪ್ರೀಯ ಕಲಾ ಪ್ರಕಾರಗಳಾದ ಲಾವಣಿ ಹಾಗೂ ಗೀಗೀ ಪದಗಳು ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ವಿಷಯ ವಸ್ತು ಒಳಗೊಂಡು ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಮಹತ್ವದ ಕಲೆಯಾಗಿದ್ದು, ಇಂದಿನ ಸಂದರ್ಭದಲ್ಲಿ ಹೆಚ್ಚು ಕಾರ್ಯಕ್ರಮಗಳು ಏರ್ಪಡಬೇಕು. ಈಗಿನ ಪೀಳಿಗೆಯಲ್ಲಿ ಈ ಕಲೆಯ ಕುರಿತು ಆಸಕ್ತಿ ಮೂಡಿಸುವ ಕೆಲಸವಾಗಬೇಕು ಎಂದರು.ಜನಪದ ಅಕಾಮಿಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಮಾತನಾಡಿ, ಹೊಸ ಕಲಾವಿದರಿಗೆ ತರಬೇತಿ ನೀಡುವ ಮೂಲಕ ಲಾವಣಿ ಹಾಗೂ ಗೀಗೀ ಪದ ಕಲಾ ತಂಡ ಹುಟ್ಟು ಹಾಕಬೇಕು ಎನ್ನುವ ಕನಸು ಇಂದು ನನಸಾಗಿದೆ. ಸಹಕಾರ ನೀಡಿದ ಸರ್ವರಿಗೂ ಧನ್ಯವಾದ ತಿಳಿಸಿದರು.
ಹವ್ಯಾಸಿ ರಂಗಕರ್ಮಿ ಮೌನೇಶ ಸಿ. ಬಡಿಗೇರ (ನರೇಗಲ್ಲ) ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಎಸ್. ಪಾಟೀಲ, ಸದಸ್ಯ ರಾಮು ಬಾವಿ, ವಿರುಪಾಕ್ಷಪ್ಪ ಬೆಟಗೇರಿ, ಹನಮಂತಪ್ಪ ಬಾಂಗಾರಿ, ಹಿರಿಯರಾದ ಮಹಾದೇವಪ್ಪ ಬಳಿತೋಟ, ಹಿರಿಯ ಕಲಾವಿದ ಪಂಚಯ್ಯ ನಾಗಾವಿಮಠ, ವಿರುಪಾಕ್ಷೇಶ್ವರ ಭಜನಾ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ಕಮತರ, ಸಂಯೋಜಕ ಶಿವು ಭಜಂತ್ರಿ ಉಪಸ್ಥಿತರಿದ್ದರು.ನಂತರ ಜರುಗಿದ ಹರದೇಶಿ ನಾಗೇಶಿ ಗೀಗೀ ಪದ ಕಾರ್ಯಕ್ರಮದಲ್ಲಿ ಬಸವರಾಜ ಹಡಗಲಿ, ನಿಂಗಪ್ಪ ದಿಂಡೂರ, ವೀರಣ್ಣ ಅಂಗಡಿ ಹಾಗೂ ತಂಡದವರು ಮತ್ತು ನಾಗೇಶಿ ಹಾಡುಗಾರಿಕೆಯಲ್ಲಿ ಯಲ್ಲವ್ವ ಸಾಲಿಮನಿ, ಲಕ್ಷ್ಮೀಬಾಯಿ ಮಾದರ, ಸಾವಿತ್ರಿಬಾಯಿ ಪೂಜಾರ ಮತ್ತು ತಂಡದವರ ಗೀಗೀ ಪದ ಜುಗಲ್ ಬಂದಿ ಜನಮನ ರಂಜಿಸಿತು.
ಹಿರಿಯ ಕಲಾವಿದರು ನಾಡಗೀತೆ ಹಾಡಿದರು. ಮರಿಯಪ್ಪ ವಡ್ಡರ ಸ್ವಾಗತಿಸಿದರು. ಶಿಕ್ಷಕ ಮುತ್ತುರಾಜ ಗಡ್ಡಿ ನಿರೂಪಿಸಿದರು. ಶಿವು ಭಜಂತ್ರಿ ವಂದಿಸಿದರು.