ಕರ್ನಾಟಕ ರಾಜ್ಯೋತ್ಸವ, ಮಂಗಳೂರು ಕಸಾಪ ಘಟಕದ ಪದಾಧಿಕಾರಿಗಳ ಪದಗ್ರಹಣಕನ್ನಡಪ್ರಭ ವಾರ್ತೆ ಕುಕನೂರು
ಕನ್ನಡ ರಕ್ಷಿಸುವ ಕಾರ್ಯ ಆಗಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಮಹೇಶ ಸಬರದ ಹೇಳಿದರು.ತಾಲೂಕಿನ ರ್ಯಾವಣಕಿ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕುಕನೂರು ಹಾಗೂ ಹೋಬಳಿ ಘಟಕ ಮಂಗಳೂರು ಇವುಗಳ ಸಹಯೋಗದೊಂದಿಗೆ ಜರುಗಿದ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಮಂಗಳೂರು ಕಸಾಪ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ನಾಡಿನಲ್ಲಿ ನಾವು ಹುಟ್ಟಿರುವುದು ಪುಣ್ಯದ ಫಲ. 1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ ಮಾಡಲಾಯಿತು. ಈ ನೆಲ, ಜಲ, ಭಾಷೆ, ನಾಡು ನುಡಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆ ಸ್ಥಾಪನೆ ಮಾಡಲಾಯಿತು. ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು ಕನ್ನಡ ಸಾಹಿತ್ಯ ಪರಿಷತ್ ಹುಟ್ಟು ಹಾಕುವಲ್ಲಿ ಪ್ರಮುಖ ರೂವಾರಿಗಳಾಗಿದ್ದರು ಎಂದು ಹೇಳಿದರು.
ಉಪನ್ಯಾಸಕ ಶರಣಪ್ಪ ಉಮಚಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ಗೆ 110 ವರ್ಷಗಳ ಇತಿಹಾಸವಿದೆ. 4,35,000 ಜನರು ಕಸಾಪಕ್ಕೆ ಅಜೀವ ಸದಸ್ಯರು ಇದ್ದಾರೆ. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ಸುಮಾರು 25 ವರ್ಷಗಳಾಗಿವೆ ಎಂದರು.ಸಹಕಾರ ರತ್ನ ಪ್ರಶಸ್ತಿ ವಿಜೇತ ಯಲಬುರ್ಗಾ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಮಾತನಾಡಿ, ಕನ್ನಡಪರ ಕೆಲಸ ಮಾಡಲು ಯಾರೂ ಹಿಂಜರಿಯಬಾರದು ಎಂದರು.
ನಾಗಯ್ಯ ಹಿರೇಮಠ ರ್‍ಯಾವಣಕಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ, ಮಂಗಳೂರು ಗ್ರಾಪಂ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರ, ಮಂಗಳೂರು ಕಸಾಪ ಹೋಬಳಿ ಘಟಕದ ಅಧ್ಯಕ್ಷ ಯೋಗಪ್ಪ ಪೂಜಾರ ಇತರರಿದ್ದರು.