ಪಂಚಾಯತ್‌ ವ್ಯವಸ್ಥೆ ಬಲಪಡಿಸುವ ಕಾರ್ಯವಾಗಲಿ

KannadaprabhaNewsNetwork |  
Published : Jun 11, 2025, 12:10 PM IST
ಫೋಟೋ ಜೂ.೧೦ ವೈ.ಎಲ್.ಪಿ. ೦೧ | Kannada Prabha

ಸಾರಾಂಶ

ಪಂಚಾಯತ್ ವ್ಯವಸ್ಥೆ ಇನ್ನಷ್ಟು ಬಲಪಡಿಸುವ ಕೆಲಸ ಸರ್ಕಾರ ಪ್ರತಿನಿಧಿಗಳಿಂದ ಆಗಬೇಕು. ಇಂದಿಗೂ ಸ್ಥಳೀಯ ಸರ್ಕಾರದ ಕೆಲಸ ಕಾರ್ಯ ಏನು ಎಂಬ ಬಗ್ಗೆ ಗೊಂದಲವಿದೆ

ಯಲ್ಲಾಪುರ: ಗಾಂಧೀಜಿ ಕನಸಿನ ಗ್ರಾಮ ರಾಜ್ಯ ಕಲ್ಪನೆಯನ್ನು ರಾಮಕೃಷ್ಣ ಹೆಗಡೆ ಕಾನೂನು ತಂದು ವ್ಯವಸ್ಥೆ ರೂಪಿಸಿದ್ದರು. ನಂತರ ರಾಜೀವ ಗಾಂಧಿ, ವೀರಪ್ಪ ಮೋಯ್ಲಿ, ಸಿದ್ದರಾಮಯ್ಯ ಸೇರಿದಂತೆ ಅನೇಕರು ಆ ವ್ಯವಸ್ಥೆ ಪರಿಪೂರ್ಣ ಮಾಡುವಲ್ಲಿ ಕಾರಣರಾಗಿದ್ದಾರೆ ಎಂದು ರಾಜ್ಯ ನೀತಿ ಮತ್ತು ಯೋಜನೆ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಹೇಳಿದರು.

ಅವರು ಮಂಗಳವಾರ ಪಟ್ಟಣದ ನಿಸರ್ಗಮನೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ, ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಮಹಾಒಕ್ಕೂಟ, ಟೀಡ್ ಟ್ರಸ್ಟ್ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಎಲ್ಲ ವೃಂದ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಪಂಚಾಯತ್ ರಾಜ್ ಸಬಲೀಕರಣ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪಂಚಾಯತ್ ವ್ಯವಸ್ಥೆ ಇನ್ನಷ್ಟು ಬಲಪಡಿಸುವ ಕೆಲಸ ಸರ್ಕಾರ ಪ್ರತಿನಿಧಿಗಳಿಂದ ಆಗಬೇಕು. ಇಂದಿಗೂ ಸ್ಥಳೀಯ ಸರ್ಕಾರದ ಕೆಲಸ ಕಾರ್ಯ ಏನು ಎಂಬ ಬಗ್ಗೆ ಗೊಂದಲವಿದೆ. ಅದರ ಬಗ್ಗೆ ಸ್ಪಷ್ಟತೆ ದೊರೆಯಬೇಕು. ಅಸೆಂಬ್ಲಿಗೆ ಇರುವಷ್ಟು ಶಕ್ತಿ ಪಂಚಾಯತಕ್ಕೆ ಇದೆ. ಆದರೆ ರಾಜಕಾರಣದ ಇಚ್ಛಾಶಕ್ತಿ ಕೊರತೆಯಿಂದ ಅದು ಗಮನಕ್ಕೆ ಬರುತ್ತಿಲ್ಲ. ಗ್ರಾಮ ಸಭೆಯ ತೀರ್ಮಾನ ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಅದು ಸರಿಯಾಗಿ ಜಾರಿಯಾಗುತ್ತಿಲ್ಲ ಎಂದ ಅವರು, ಜಾತಿ, ಧರ್ಮ, ಗಂಡು, ಹೆಣ್ಣು ಈ ಎಲ್ಲ ಬೇದ-ಭಾವ ರಾಜಕೀಯ ವ್ಯವಸ್ಥೆಯಲ್ಲಿ ಬೆಳೆಯುತ್ತಿರುವುದರಿಂದ ನಮ್ಮ ಈ ವ್ಯವಸ್ಥೆಗೆ ಧಕ್ಕೆಯಾಗಿದೆ. ಲೋಹಿಯಾರವರ ೪ ಕನಸಿನ ಕಂಬಗಳು ಸದೃಢವಾದಾಗ ಮಾತ್ರ ಈ ವ್ಯವಸ್ಥೆ ಸರಿಯಾದೀತು. ಮಹಿಳೆಯರಿಂದ ಮಾತ್ರ ಹೆಚ್ಚು ಶುದ್ಧತೆ ಬದ್ಧತೆ ಪಡೆಯಬಹುದು. ಅಲ್ಲದೇ ದೇಶದಲ್ಲಿ ಸಂಪೂರ್ಣ ಮದ್ಯ ನಿಷೇಧವಾಗಬೇಕು. ರಾಜ್ಯದಲ್ಲಿ ₹೩೪ ಸಾವಿರ ಕೋಟಿ ಮದ್ಯದಿಂದ ಆದಾಯವಿದೆ. ಹಾಗಾಗಿ ರಾಜ್ಯ ಸರ್ಕಾರ ಒಪ್ಪುತ್ತಿಲ್ಲ. ಮೋದಿಯವರ ಅನೇಕ ಒಳ್ಳೆಯ ಕೆಲಸದ ಜತೆ ಮದ್ಯವನ್ನು ದೇಶದಲ್ಲಿ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಉಪಾಧ್ಯಕ್ಷ, ಮಾಜಿ ಶಾಸಕ ಡಿ.ಆರ್. ಪಾಟೀಲ್ ಸದೃಢ ಗ್ರಾಮಸಭೆಗಳ ಮೂಲಕ ಗ್ರಾಮ ಸ್ವರಾಜ್ ಸಾಕಾರ ಕುರಿತು ಮಾತನಾಡಿ, ಕಾನೂನಿನಲ್ಲಿ ಗ್ರಾಮ ಸಭೆಗಳಿಗೆ ಸಾಕಷ್ಟು ಅಧಿಕಾರಗಳಿದ್ದು, ಅದರ ಪೂರ್ಣ ಪ್ರಮಾಣದ ಅನುಷ್ಠಾನವಾಗುತ್ತಿಲ್ಲ. ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳಿಗೂ ಆ ನಿರ್ಣಯ ರದ್ದು ಮಾಡುವ ಅಧಿಕಾರವಿಲ್ಲ. ಆದರೆ, ಪ್ರಜೆಗಳಿಗೆ ಅಧಿಕಾರ ಬಂದೇ ಇಲ್ಲ. ಹೆಣ್ಣುಮಕ್ಕಳು ಗಟ್ಟಿಯಾಗಿ ಗಾಂಧೀಜಿಯವರ ಕನಸಿನ ಭಾರತ ಮಾಡುವಲ್ಲಿ ಮುಂದೆ ಬರಬೇಕು. ಯಾರೂ ಏನೂ ಮಾಡುವುದಿಲ್ಲ. ನಾನು ನಮ್ಮ ಕೆಲಸ ಮೊದಲು ಮಾಡಬೇಕು. ಆಗ ಎಲ್ಲವೂ ಸರಿಹೋಗುತ್ತದೆ ಎಂದರು.

ಪಂಚಾಯತ್ ರಾಜ್ಯ ಪರಿಷತ್ ಕಾರ್ಯಾಧ್ಯಕ್ಷ ವಿ.ವೈ. ಘೋರ್ಪಡೆ ಅಧ್ಯಕ್ಷತೆ ವಹಿಸಿದ್ದರು.

ಪಂಚಾಯತ್ ರಾಜ್ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಪ್ರಸ್ತಾಪಿಸಿ, ಹಳ್ಳಿಗಳ ಸರ್ಕಾರ ಸ್ಥಳಿಯ ಆಡಳಿತವಾಗಿದೆ. ಹಳ್ಳಿಗಳ ಜತೆಗೆ ಜನ ಅಭಿವೃದ್ಧಿಯಾಗಲು ಪಂಚಾಯತ್ ವ್ಯವಸ್ಥೆ ಬಲಪಡಿಸುವ ಕೆಲಸ ಆಗಬೇಕು.ಗಾಂಧೀಜಿಯವರ ಕನಸು ಸಾಕಾರಗೊಳಿಸುವ ಪ್ರಯತ್ನ ಆಗಬೇಕು ಎಂದರು.

ಗಾಂಧಿ ಅನುಯಾಯಿ ಪ್ರೊ. ಶಿವರಾಜ್ ಪಂಚಾಯತ್ ರಾಜ್ ಆರ್ಥಿಕ ಸಬಲೀಕರಣದ ಕುರಿತು ಮಾತನಾಡಿ, ಗಾಂಧೀಜಿಯವರ ಸತ್ಯ, ಅಹಿಂಸೆಯ ಮೂಲಕ ಮಾನವೀಯ ಮೌಲ್ಯಗಳ ಚಿಂತನೆ ಸುಂದರವಾಗಿ ಪ್ರಸ್ತುತಪಡಿಸಿದರು.

ಎಂ.ಎಲ್.ಸಿ. ಶಾಂತಾರಾಮ ಸಿದ್ದಿ, ಟೀಡ್ ಟ್ರಸ್ಟ್ ಮ್ಯಾನೇಜಿಂಗ್ ಡೈರೆಕ್ಟರ್ ಮೋಹಿನಿ ಪೂಜಾರಿ, ಗ್ರಾಪಂ ರಾಜ್ಯ ಒಕ್ಕೂಟದ ಪ್ರಧಾನಕಾರ್ಯದರ್ಶಿ ಸತೀಶ ಕಾಡಶೆಟ್ಟಿಹಳ್ಳಿ, ಕೋಶಾಧ್ಯಕ್ಷ ಚಿಕ್ಕೋಮಾರಿಗೌಡ, ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಬಿ.ಕೆ. ಮಂಜುನಾಥ ಅಲ್ಲದೇ ಜಿಲ್ಲೆಯ ಎಲ್ಲ ಒಕ್ಕೂಟಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಸಾದ ಹೆಗಡೆ ನಿರ್ಮಿಸಿದ ಸಭಾಭವನವನ್ನು ಹಿರಿಯರಾದ ಡಿ.ಆರ್. ಪಾಟೀಲ ಲೋಕಾರ್ಪಣೆಗೊಳಿಸಿದರು.

ಸೀತಾ ಸದಾನಂದ ಭಟ್ಟ ಪ್ರಾರ್ಥಿಸಿದರು. ಗ್ರಾಪಂ ಜನಪ್ರತಿನಿಧಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಕೆ. ಭಟ್ಟ ಯಡಳ್ಳಿ ಸ್ವಾಗತಿಸಿದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು. ಶಿರಸಿ ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಪ್ರ ಸಮುದಾಯದ ಯುವಕರು ಸಂಘಟಿತರಾಗಿ
ಚಿರತೆ ದಾಳಿಗೆ ಮಹಿಳೆ ಬಲಿ