ಶಿವಮೊಗ್ಗ: ಬಹುತೇಕ ಅಧ್ಯಾಪಕರು ನಿವೃತ್ತರಾಗುತ್ತಿದ್ದರೂ, ಪೂರ್ಣ ಪ್ರಮಾಣದ ನೇಮಕಾತಿ ಪ್ರಕ್ರಿಯೆಗಳು ನಡೆಯದೇ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಿಶ್ವವಿದ್ಯಾಲಯಗಳು ವಿಫಲವಾಗುತ್ತಿವೆ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಕಂಠ ಕೂಡಿಗೆ ಹೇಳಿದರು.
ವಿಶ್ವವಿದ್ಯಾಲಯಗಳಲ್ಲಿ ಹಿಂದೆ ಸುವ್ಯವಸ್ಥಿತ ಕಟ್ಟಡಗಳು, ಮೂಲಸೌಕರ್ಯಗಳ ಕೊರತೆ ಇದ್ದರೂ, ನುರಿತ, ಅನುಭವಿ ಅಧ್ಯಾಪಕರ ಬಲವಿತ್ತು. ಅಂದು ಸಿಕ್ಕ ಗುಣಾತ್ಮಕ ಶಿಕ್ಷಣದ ಫಲವಾಗಿ ಇಂದು ಸಾವಿರಾರು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಆದರೆ, ಬಹುತೇಕ ವಿಶ್ವವಿದ್ಯಾಲಯಗಳು ಇಂದು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ. ಸಂಶೋಧನೆಗಳು ಸ್ಥಗಿತವಾಗುತ್ತಿವೆ. ಗುಣಾತ್ಮಕ ಶಿಕ್ಷಣ ಇಲ್ಲವಾಗುತ್ತಿದೆ. ಅಧ್ಯಾಪಕರ ನೇಮಕ ಮಾಡಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಜಾತಿ ಸಂಘಟನೆಗಳ ನಿಷೇಧ ಅಗತ್ಯ:ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಜಾತಿ ಸಂಘಟನೆಗಳನ್ನು ಕಟ್ಟಿಕೊಂಡು ಕ್ಯಾಂಪಸ್ ವಾತಾವರಣ ಹಾಳುಮಾಡುತ್ತಿದ್ದಾರೆ. ಯಾವುದೇ ಜಾತಿ ಸಂಘಟನೆಗಳಿಗೆ ಅವಕಾಶ ನೀಡಬಾರದು. ಕೆಲ ಅಧ್ಯಾಪಕರು ಬೋಧನೆ ಮಾಡುವ ಬದಲು ಹಣ ಗಳಿಕೆಯತ್ತ ಗಮನ ನೀಡುತ್ತಿದ್ದಾರೆ. ತಾವು ಹಾಗೂ ಚಂದ್ರಶೇಖರ್ ಅವರು ಅಧ್ಯಾಪಕರಾದ ಅವಧಿಯಲ್ಲಿ ಯಾವತ್ತೂ ಜಾತಿಭೇದ ಮಾಡಲಿಲ್ಲ. ಹಣಗಳಿಸುವ ಆಲೋಚನೆಯೂ ಬರಲಿಲ್ಲ. ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇವೆ ಎಂದರು.
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಪ್ರೊ. ಹೂವಯ್ಯಗೌಡ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪೂರ್ಣಾನಂದ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ದತ್ತಾತ್ರೇಯ, ರಾಜ್ಯಶಾಸ್ತ್ರ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಎಂ.ಎಚ್.ಪ್ರಹ್ಲಾದಪ್ಪ ಉಪಸ್ಥಿತರಿದ್ದರು.