ಜಿಲ್ಲಾ ಮಟ್ಟದ ಯುವ ಜನೋತ್ಸವಕ್ಕೆ ಸಚಿವ ಎಚ್.ಕೆ. ಪಾಟೀಲ್ ಚಾಲನೆಗದಗ:ನಾಡಿನ ಪ್ರಸಿದ್ಧ ಕಲಾವಿದರಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ನೀಡುವ ಶಿಳ್ಳೆ, ಚಪ್ಪಾಳೆ, ಪ್ರೋತ್ಸಾಹವು ಸ್ಥಳೀಯ ಯುವ ಕಲಾವಿದರಿಗೂ ನೀಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯವಾಗಲಿ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಗದಗ ಜಿಲ್ಲೆಯ ವ್ಯಾಪ್ತಿಯ ಪ್ರತಿ ೧೫ ಕಿಮೀ ಅಂತರದಲ್ಲಿ ಸಾಹಿತ್ಯ, ಸಂಗೀತ , ಸಂಸ್ಕೃತಿ, ಸಂಪ್ರದಾಯ, ಕ್ರೀಡೆ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆಗೈದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಮಹನೀಯರನ್ನು ಕಾಣಬಹುದಾಗಿದೆ. ಈ ಸಾಧನೆ ಗದಗ ಜಿಲ್ಲೆಯ ಹೆಮ್ಮೆಯ ವಿಷಯ. ಜಿಲ್ಲೆಯವರಾದ ಪಂಡಿತ ಭೀಮಸೇನ ಜೋಶಿಯವರು ಒಬ್ಬರೇ ಈವರೆಗೂ ಸಂಗೀತ ಕ್ಷೇತ್ರಕ್ಕೆ ಭಾರತ ರತ್ನ ಪಡೆದವರಾಗಿದ್ದಾರೆ ಎಂದರು.
ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡುವುದಕ್ಕೆ ತುಂಬಾ ಸಂತೋಷವೆನಿಸುತ್ತದೆ. ಮೊನ್ನೆ ನ.೧ ರಿಂದ ೩ರ ವರೆಗೆ ನಗರದಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಮುಖ್ಯವಾಗಿತ್ತು. ಅಲ್ಲದೇ ಮೂರು ದಿನಗಳ ಕಾಲ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಕಲಾವಿದರು ಕಲಾಪ್ರಕಾರಗಳಿಂದ ಅದ್ಭುತ ಕಾರ್ಯಕ್ರಮ ಮೂಡಿ ಬಂದಿತು. ಕಾರ್ಯಕ್ರಮ ಯಶಸ್ವಿಗೆ ಯುವಜನರ ಪಾಲ್ಗೊಳ್ಳುವಿಕೆ ಪ್ರಮುಖವಾಗಿತ್ತು ಎಂದರು.ಗದಗ ಜಿಲ್ಲೆ ಕಲೆ, ಸಂಸ್ಕೃತಿ, ಪರಂಪರೆ, ಸಾಹಿತ್ಯ, ಇತಿಹಾಸ ಹಾಗೂ ಕ್ರೀಡಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯಂತೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ ಹಾಗೂ ಶಕ್ತಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲಾಡಳಿತದ ಕಾರ್ಯ ರಾಜ್ಯ ಮಟ್ಟದಲ್ಲಿಯೇ ಉತ್ತಮವಾಗಿರುವುದು ಸಂತಸ ತಂದಿದೆ ಎಂದರು.
ವಿಪ ಸದಸ್ಯಎಸ್.ವಿ. ಸಂಕನೂರ ಮಾತನಾಡಿ, ಜಗತ್ತಿನಲ್ಲಿ ಹೆಚ್ಚು ಯುವಜನರನ್ನು ಹೊಂದಿದ ರಾಷ್ಟ್ರ ಭಾರತ. ಯುವಜನರು ಮನಸ್ಸು ಮಾಡಿದರೆ ಅಸಾಧ್ಯವೆಂಬುದು ಯಾವುದಿಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ ಯುವಕರಲ್ಲಿ ಅದಮ್ಯ ಶಕ್ತಿ ಇದೆ. ಬದಲಾವಣೆಯಾಗಬೇಕಾದರೆ ಅದು ಯುವಕರಿಂದ ಸಾಧ್ಯ ಎಂದಿದ್ದಾರೆ. ಯುವಜನತೆಗೆ ಸಾಧನೆಗೈಯಲು ಅಗತ್ಯ ಪ್ರೋತ್ಸಾಹ, ಸಹಕಾರ ನೀಡಬೇಕು. ಶಿಕ್ಷಣವೆಂದರೆ ಕೇವಲ ಪಠ್ಯಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಿಗೂ ವಿಕಸನ ಹೊಂದಬೇಕು. ದೇಶದ ಸಂಪತ್ತು ಯಾವುದೆಂದರೆ ಖನಿಜ ಸಂಪತ್ತು, ಅರಣ್ಯ ಸಂಪತ್ತು, ನೈಸರ್ಗಿಕ ಸಂಪತ್ತು ಎಂದು ಹೇಳುತ್ತೇವೆ ಅದರೊಟ್ಟಿಗೆ ಯುವ ಜನರೂ ಸಹ ದೇಶದ ಸಂಪತ್ತೆಂದು ನೋಡುವ ಮನೋಭಾವ ನಮ್ಮದಾಗಬೇಕಿದೆ. ಇತ್ತೀಚೆಗೆ ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಮಿತಿ ಮೀರುತ್ತಿದೆ. ದೇಶಿಯ ಸಾಹಿತ್ಯ, ಸಂಸ್ಕೃತಿ ಬೆಳೆಸುವ ಹಾಗೂ ಉಳಿಸುವ ಮನೋಭಾವನೆ ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು.