ಕನ್ನಡಪ್ರಭ ವಾರ್ತೆ ದಾವಣಗೆರೆ
ದೇವಸ್ಥಾನ ಪ್ರವೇಶಿಸಿದ ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಥಳಿಸಿದವರನ್ನು ಬಂಧಿಸಿ, ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ-ದಮನಿತರ ಹೋರಾಟ ಸಮಿತಿ (ಡಿಡಿಎಚ್ಎಸ್) ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಸಂಘಟನೆ ಪದಾಧಿಕಾರಿಗಳು, ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಬೆಳಲಗೆರೆ ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತರನ್ನು ಕಟ್ಟಿ ಹಾಕಿದವರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಕ್ರಮ ಕೈಗೊಳ್ಳುವಂತೆ ಎಸಿ ಕಚೇರಿ ಅಧಿಕಾರಿಗಳ ಮುಖಾಂತರ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಅರ್ಪಿಸಲಾಯಿತು.
ಇದೇ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾ ಸಂಚಾಲಕ, ವಕೀಲ ಸತೀಶ ಅರವಿಂದ ಮಾತನಾಡಿ, ಚನ್ನಗಿರಿ ತಾ. ಬಸವಾಪಟ್ಟಣ ಹೋಬಳಿ ಬೆಳಲಗೆರೆ ಗ್ರಾಮದಲ್ಲಿ ಜು.31ರಂದು ಸಂಜೆ ಗ್ರಾಮದ ದೊಡ್ಡಯ್ಯ ಸ್ವಾಮಿ ದೇವಸ್ಥಾನಕ್ಕೆ ಅದೇ ಊರಿನ ದಲಿತ ಸಮುದಾಯಕ್ಕೆ ಸೇರಿದ 6 ಯುವಕರು ಪ್ರವೇಶಿಸಿ, ದೇವರಿಗೆ ಕೈ ಮುಗಿದು ಹೊರಗೆ ಬಂದಿದ್ದನ್ನು ನೋಡಿದ ಸವರ್ಣೀಯರು ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ, ಮಾರಣಾಂತಿಕ ಹಲ್ಲೆ ಮಾಡಿದ್ದು ಅಕ್ಷಮ್ಯ ಎಂದರು.ಮಾರಣಾಂತಿಕ ಹಲ್ಲೆಗೊಳಗಾದ ದಲಿತ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂತಹ ಘಟನೆ ನಡೆದ ಮಾರನೆಯ ದಿನವೇ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರು ಭೇಟಿ ನೀಡಿ, ಗ್ರಾಮದ ಎಲ್ಲಾ ಹಿರಿಯರ ಸಮಕ್ಷಮದಲ್ಲಿ ಮನವೊಲಿಸಿ, ಇಂತಹ ಘಟನೆ ನಡೆಯಬಾರದು, ಎಲ್ಲರೂ ಸಹೋದರತೆಯಿಂದ ಬಾಳಬೇಕೆಂಬ ಎಚ್ಚರಿಕೆ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆಗೂ ಆದೇಶಿಸಿದ್ದರು ಎಂದು ಅವರು ತಿಳಿಸಿದರು.
ದಲಿತ ಯುವಕರ ಮೇಲೆ ಹಲ್ಲೆ ನಡೆದ 12 ದಿನ ಕಳೆದರೂ, ಘಟನೆಗೆ ಸಂಬಂಧಿಸಿದಂತೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ 42 ಜನರ ವಿರುದ್ಧ ಕೇಸ್ ದಾಖಲಾಗಿದ್ದರೂ ಈವರೆಗೆ ಕಂಬಕ್ಕೆ ಕಟ್ಟಿ ಹಾಕಿ, ಥಳಿಸಿದ ಸವರ್ಣೀಯರನ್ನು ಬಂಧಿಸದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ದಲಿತ ವಿರೋಧಿ ನೀತಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಹಲ್ಲೆಗೊಳಗಾದ ಆರೂ ಜನ ಯುವಕರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು. ದಲಿತ ಯುವಕರ ಮೇಲೆ ಹಲ್ಲೆ ಮಾಡಿದ 42 ಜನ ಸವರ್ಣೀಯರನ್ನು ತಕ್ಷಣವೇ ಬಂಧಿಸಬೇಕು. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಶಿಕ್ಷೆಗೊಳಪಡಿಸಬೇಕು. ನೊಂದ ದಲಿತ ಯುವಕರಿಗೆ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸೂಕ್ತ ಪರಿಹಾರವನ್ನು ಸರ್ಕಾರ, ಜಿಲ್ಲಾಡಳಿತ, ಸಂಬಂಧಿಸಿದ ಇಲಾಖೆ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಂಘಟನೆಯ ರಾಮಾಂಜನೇಯ, ಸುರೇಶ ಶಿಡ್ಲಪ್ಪ ವೆಂಕಟೇಶ, ಪವಿತ್ರ, ಮಾಡಾಳ ಶಿವಕುಮಾರ, ಯಲ್ಲಪ್ಪ, ಗೋವಿಂದಪ್ಪ, ರಘು, ಉಮೇಶ, ನಾಗೇಶ ಇತರರು ಪ್ರತಿಭಟನೆಯಲ್ಲಿದ್ದರು..................
-11ಕೆಡಿವಿಜಿ1:ಚನ್ನಗಿರಿ ತಾ. ಬೆಳಲಗೆರೆ ಗ್ರಾಮದ ದೇವಸ್ಥಾನ ಪ್ರವೇಶಿಸಿದ 6 ದಲಿತ ಯುವಕರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ದಲಿತ-ದಮನಿತರ ಹೋರಾಟ ಸಮಿತಿ ಪ್ರತಿಭಟಿಸಿ, ಮನವಿ ಅರ್ಪಿಸಿತು.