ಶಿರಸಿ: ಕೂಲಿ ಕಾರ್ಮಿಕರ ಕೊರತೆಯಿಂದ ಕೃಷಿ ಜಮೀನುಗಳು ಪಾಳು ಬೀಳುತ್ತಿದ್ದು, ಯುವಕರು ಕೃಷಿಯತ್ತ ಆಸಕ್ತಿ ಮೂಡಿಸಿಕೊಳ್ಳಬೇಕು. ಅಲ್ಲದೇ ಯಾಂತ್ರಿಕರಣ ಬಳಸಿಕೊಂಡು ಹೆಚ್ಚಿನ ಬೆಳೆ ಪಡೆಯಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ನಗರದ ಅರಣ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ಶಿರಸಿ ಕೃಷಿ ವಿಜ್ಞಾನ ಕೇಂದ್ರ, ಅರಣ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ೨೦೨೪- ೨೫ನೇ ಆತ್ಮ ಯೋಜನೆಯಲ್ಲಿ ರೈತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಿಸಾನ್ ಗೋಷ್ಠಿಯನ್ನು ಉದ್ಘಾಟಿಸಿ, ಮಾತನಾಡಿದರು.ರೈತನ ಬದುಕು ಬಹಳ ಕಷ್ಟಕರವಾಗಿದ್ದು, ಅವರನ್ನು ಗೌರವಿಸುವುದು, ಸೌಲಭ್ಯಗಳನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ನಾಡಿಗೆ ಅನ್ನ ನೀಡುವ ರೈತ ಮುನಿಸಿಕೊಂಡರೆ ನಾವೆಲ್ಲರೂ ಉಪವಾಸ ಇರಬೇಕಾಗುತ್ತದೆ. ಭಾರತ ಕೃಷಿ ಸಂಪದ್ಭರಿತ ರಾಷ್ಟ್ರವಾಗಿದ್ದು, ಆದರೆ ಸ್ವಾಂತಂತ್ರ್ಯ ಪೂರ್ವದಲ್ಲಿ ಕೃಷಿ ಬಹಳಷ್ಟು ಹಿಂದುಳಿದಿತ್ತು. ಸ್ವಾಂತಂತ್ರ್ಯಾನಂತರ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಹಿಡಿದು ಇಂದಿನ ಪ್ರಧಾನಿಯವರೆಗೂ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮಳೆ, ಬಿಸಿಲು, ಚಳಿಯನ್ನದೇ ದಿನನಿತ್ಯ ದುಡಿಮೆ ಮಾಡಿ, ದೇಶಕ್ಕೆ ಅನ್ನ ನೀಡುತ್ತಿದ್ದಾನೆ. ಅವರನ್ನು ಗೌರವಿಸಬೇಕು. ಎಂದಿಗೂ ಅವರನ್ನು ಮರೆಯಬಾರದು. ರೈತರ ಪರವಾಗಿ ಸರ್ಕಾರಗಳು ನಿಲ್ಲಬೇಕು.
ಎಲೆಚುಕ್ಕೆ, ಹಳದಿ ರೋಗ, ಕೊಳೆ, ಚೈನಾ ವೈರಸ್‌ನಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಬಾಳೆ ಹಾಗೂ ಭತ್ತಕ್ಕೂ ರೋಗ ತಗುಲಿ ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ. ರೈತರು ಬೆಳೆದ ಬೆಳೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಳ್ಳೆಯ ಧಾರಣೆ ನಿರ್ಧರಿಸಬೇಕು. ರಸಗೊಬ್ಬರಗಳ ದರ ದುಪ್ಪಟ್ಟಾಗಿದ್ದು, ಅಲ್ಲದೇ ಹಿಂದೆ ನೀಡುತ್ತಿದ್ದ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ. ನೀರಾವರಿ ಯೋಜನೆಯ ಜತೆ ರಸಗೊಬ್ಬರ, ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ನೀಡಬೇಕು ಎಂದರು.ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಿದ ಗಣಪತಿ ಪಂಡಿತ, ಸುಭಾಷ ಕಾಟೇನಳ್ಳಿ, ರಾಮಚಂದ್ರ ಹೆಗಡೆ ಊರತೋಟ, ಮಧುಕೇಶ್ವರ ನಾಯ್ಕ, ದಿನೇಶ ಮರಾಠಿ ಅವರನ್ನು ಸನ್ಮಾನಿಸಲಾಯಿತು.ಆತ್ಮ ಯೋಜನೆಯ ಸಲಹಾ ಸಮಿತಿ ಸದಸ್ಯ ದುಷ್ಯಂತರಾಜ ಕೊಲ್ಲೂರಿ, ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಆರ್. ವಾಸುದೇವ, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥೆ ಡಾ. ರೂಪಾ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವ್ಕರ, ಸಹಾಯಕ ನಿರ್ದೇಶಕ ಟಿ.ಎಚ್. ನಟರಾಜ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ, ಬಗರ್‌ಹುಕುಂ ಸಮಿತಿ ಸದಸ್ಯ ಎಸ್.ಕೆ. ಭಾಗ್ವತ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಫಲಾನುಭವಿ ರೈತರಿಗೆ ಸಾಂಕೇತಿಕವಾಗಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.