ರೋಣ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿ (ಡಾ. ಅಂಬೇಡ್ಕರ್ ವಾದ) ನೇತೃತ್ವದಲ್ಲಿ ಟೈರ್ ಸುಟ್ಟು ಪ್ರತಿಭಟಿಸಲಾಯಿತು.
ಪ್ರತಿಭಟನೆ ಮೆರವಣಿಗೆ ಸೂಡಿ ವೃತ್ತದಿಂದ ಪ್ರಾರಂಭಗೊಂಡು ಮುಲ್ಲನಬಾವಿ ವೃತ್ತ, ಪೋತದಾರ ರಾಜ ಕಟ್ಟೆ ಬಳಿ ಬಂದು, ಮಾನವ ಸರಪಳಿ ನಿರ್ಮಿಸಿ, ಟೈರ್‌ಗೆ ಬೆಂಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಅಧ್ಯಕ್ಷ ಹನುಮಂತ ಚಲವಾದಿ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಗೃಹಮಂತ್ರಿ ಹುದ್ದೆಯನ್ನು ಪಡೆದುಕೊಂಡು, ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ದೇವರ ಜಪ ಮಾಡುವುದಿದ್ದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ, ಯಾವುದಾದರೂ ಗುಡಿಯಲ್ಲಿ ಕುಳಿತುಕೊಳ್ಳಬೇಕು. ಅಮಿತ್ ಶಾ ಅವರನ್ನು ಕೂಡಲೇ ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.ದಲಿತ ಮುಖಂಡರಾದ ವಿಜಯ ಚಲವಾದಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿರುವುದರಿಂದ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು. ಅಮಿತ್ ಶಾ ಅವರು ಡಾ. ಅಂಬೇಡ್ಕರ್ ಬಗ್ಗೆ ಬಿಜೆಪಿಗರ ಅಂತರಂಗದಲ್ಲಿ ಇರುವ ಅಭಿಪ್ರಾಯವನ್ನು ಬಹಿರಂಗವಾಗಿ ದೇಶದ ಮುಂದೆ ತೆರೆದಿಟ್ಟಿದ್ದಾರೆ. ಅಂಬೇಡ್ಕರ್ ಬಗ್ಗೆ ಅವರಿಗಿರುವ ಅಸಹನೆಯನ್ನು ಇದು ತೋರಿಸುತ್ತದೆ ಎಂದರು.
ತಹಸೀಲ್ದಾರ್ ನಾಗರಾಜ ಕೆ. ಅವರಿಗೆ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ವೀರಪ್ಪ ತೆಗ್ಗಿನಮನಿ, ಬಸವರಾಜ ಹಲಗಿ, ನಾಗರಾಜ ದೊಡ್ಡಮನಿ, ರವಿ ಜೋಗಣ್ಣನವರ, ಬಸವರಾಜ ಕಾಳೆ, ಶೇಖಪ್ಪ ಕಾಳೆ, ಮಹೇಶ್ ಮಾದರ, ರಮೇಶ ಮಾದರ, ಚಂದ್ರು ಅಬ್ಬಿಗೇರಿ, ಹಿರಿಯಪ್ಪ ಮಾದರ, ಮಂಜುನಾಥ ಮುದೇನಗುಡಿ, ಬಸವರಾಜ್ ಚಲವಾದಿ, ಯಲ್ಲಪ್ಪ ಹಾದಿಮನಿ, ಅಕ್ಷಯಕುಮಾರ ದೊಡ್ಡಮನಿ, ಸಂಜಯ ಹಾದಿಮನಿ, ಮಂಜುನಾಥ ಹಾದಿಮನಿ, ಆದಿತ್ಯ ದೊಡ್ಡಮನಿ, ಪ್ರದೀಪ್ ಕಾಳೆ ಭಾಗವಹಿಸಿದ್ದರು.