ಕಲಘಟಗಿ: ಕಬಡ್ಡಿ ಗ್ರಾಮೀಣ ಕ್ರೀಡೆ ಆಗಿದ್ದು, ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಮನೋಭಾವ ಯುವಕರಲ್ಲಿ ಹೆಚ್ಚಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಗ್ರಾಪಂ ಮಾಜಿ ಸದಸ್ಯ ಸುಭಾಷಗೌಡ್ ಪಾಟೀಲ ಹೇಳಿದರು.ತಾಲೂಕಿನ ಮುಕ್ಕಲ ಗ್ರಾಮದ ಶ್ರೀ ಅಂಬೇಡ್ಕರ್ ಪ್ರೌಢಶಾಲಾ ಆವರಣದಲ್ಲಿ ಶ್ರೀ ಗೋಣಿಬಸವೇಶ್ವರ ಯುವಕ ಮಂಡಳ ವತಿಯಿಂದ 45 ಕೆಜಿ ತೂಕದ ಯುವಕರ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಓದಿಗಷ್ಟೇ ಸೀಮಿತಗೊಳಿಸುತ್ತಿದ್ದಾರೆ. ಮಕ್ಕಳು ಹೆಚ್ಚು ಅಂಕ ಗಳಿಸಿದರೆ ಸಾಕು ಎಂಬ ಮನೋಭಾವದಿಂದ ವಿವಿಧ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು. ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಸೋತವರು ಹತಾಶರಾಗದೆ ಪ್ರಯತ್ನ ಮುಂದುವರಿಸಿದರೆ ಭವಿಷ್ಯದಲ್ಲಿ ಗೆಲುವು ಸಾಧಿಸುವುದು ಖಚಿತ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಮೇಶ್ ಸೋಲಾರಗೋಪ್ಪ ಮಾತನಾಡಿದರು.ಎಸ್‌ಡಿಎಂಸಿ ಸದಸ್ಯ ಶಿವಲಿಂಗ ಜಾಯನಗೌಡ್ರ ಮಾತನಾಡಿ, ಕ್ರೀಡಾಕೂಟಗಳಲ್ಲಿ ಸೋಲು-ಗೆಲವು ಸಾಮಾನ್ಯ. ಅವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಕ್ರೀಡಾಪಟುವಿನಲ್ಲಿ ಬೆಳೆಯಬೇಕು. ಅಂದಾಗ ಮಾತ್ರ ಆ ಕ್ರೀಡಾಪಟು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಯುವ ಜನತೆ ಕ್ರೀಡೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.