ಯುವಕರು ಭವ್ಯ ಭಾರತದ ಕನಸು ಕಟ್ಟಲಿ: ಡಾ. ಮಲ್ಲಿಕಾರ್ಜುನ ಕಡ್ಡೀಪುಡಿ

KannadaprabhaNewsNetwork |  
Published : Jun 16, 2025, 03:22 AM IST
ಬ್ಯಾಡಗಿಯ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮಲ್ಲಿಕಾರ್ಜುನ ಕಡ್ಡೀಪುಡಿ ಮಾತನಾಡಿದರು. | Kannada Prabha

ಸಾರಾಂಶ

ಶಿಕ್ಷಣವು ಜ್ಞಾನ, ಕೌಶಲ್ಯ, ತಂತ್ರ ಇನ್ನಿತರ ಮಾಹಿತಿ ಒದಗಿಸುವ ಮೂಲಕ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.

ಬ್ಯಾಡಗಿ:

ಶಿಕ್ಷಣ ಕಲೆ, ಸಂಸ್ಕೃತಿ, ಸಂಸ್ಕಾರ, ಪರಂಪರೆಗಳು ಭಾರತದ ಮಣ್ಣಿನ ಗುಣಧರ್ಮದಲ್ಲಿದ್ದು, ಯುವಕರು ಭವ್ಯ ಭಾರತದ ಕನಸನ್ನು ಕಟ್ಟಿಕೊಳ್ಳದಿದ್ದರೆ ಬರುವ ದಿನಗಳಲ್ಲಿ ನಮ್ಮ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸಂಸ್ಕೃತಿಯೊಂದು ನೇಪಥ್ಯಕ್ಕೆ ಸರಿಯಲಿದೆ ಎಂದು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡೀಪುಡಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪಠ್ಯೇತರ ಚಟುವಟಿಕೆ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಗೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೈಕ್ಷಣಿಕ ಸ್ಪರ್ಧೆಯಲ್ಲಿ ನಾವೆಲ್ಲರೂ ನಮ್ಮ ಮಕ್ಕಳಿಗೆ ಕೇವಲ ಬದುಕುವುಕ್ಕಾಗಿ ಶಿಕ್ಷಣ ಕೊಡಿಸುತ್ತಿದ್ದೇವೆಯೇ ವಿನಃ ಎಲ್ಲರೂ ಒಟ್ಟಿಗೆ ಬಾಳಿ ಬದುಕಬೇಕು ಎಂಬುದನ್ನು ಹೇಳಿಕೊಡುವುದರಿಂದ ದೂರವಾಗಿದ್ದೇವೆ. ಆದರೆ ಶಿಕ್ಷಣ ಪಡೆದ ಮಕ್ಕಳನ್ನೇ ನೆಚ್ಚಿದ ಕುಟುಂಬಗಳು ಅನಾಥಾಶ್ರಮದ ಬಾಗಿಲು ತಟ್ಟುತ್ತಿದ್ದು, ಭಾರತೀಯ ಸಂಸ್ಕೃತಿ ಜೀವಂತವಾಗಿದ್ದರೆ ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಬಾಳಲು ಸಾಧ್ಯ ಎಂದರು.

ಐಟಿಐ ಕಾಲೇಜು ಪ್ರಾಚಾರ್ಯ ಸಂಜೀವ ಅಂಗಡಿ ಮಾತನಾಡಿ, ಶಿಕ್ಷಣವು ಜ್ಞಾನ, ಕೌಶಲ್ಯ, ತಂತ್ರ ಇನ್ನಿತರ ಮಾಹಿತಿ ಒದಗಿಸುವ ಮೂಲಕ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಅವುಗಳ ಜತೆಗೆ ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಲ್ಪಿಸಲಿದೆ. ಹೀಗಾಗಿ ಪ್ರತಿಯೊಬ್ಬ ಯುವಕ ಶಿಕ್ಷಣವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

ಡಾ. ದೇವೇಂದ್ರ ಮಾತನಾಡಿ, ಅಶಿಕ್ಷಿತರ ಗುಂಪಿನಲ್ಲಿ ವಿದ್ಯಾವಂತ ವ್ಯಕ್ತಿಯು ಯಾವಾಗಲೂ ಎದ್ದು ಕಾಣುತ್ತಾನೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕ ಪ್ರಗತಿ ನಿರ್ಣಾಯಕ ಪಾತ್ರ ವಹಿಸಲಿದೆ. ಶಿಕ್ಷಣದಿಂದ ಬಡತನ ನಿವಾರಣೆಯಾಗಲಿದ್ದು, ವಿದ್ಯಾವಂತ ವ್ಯಕ್ತಿ ತನ್ನ ಕುಟುಂಬವನ್ನು ಶಿಕ್ಷಣದಿಂದಲೇ ರಕ್ಷಿಸಿಕೊಳ್ಳುತ್ತಾನೆ. ಹೀಗಾಗಿ ನಾವೆಲ್ಲರೂ ಕಡ್ಡಾಯ ಶಿಕ್ಷಣವನ್ನು ಮುಕ್ತವಾಗಿ ಸ್ವಾಗತಿಸೋಣ ಎಂದರು.

ಇದೇ ಸಂದರ್ಭದಲ್ಲಿ ನಮ್ಮ ಕಾಲೇಜಿನಲ್ಲಿ ಓದಿದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ಆದ ಬಸವರಾಜ ಗವರಪ್ಪನವರ ಅವರನ್ನು‌ ಸನ್ಮಾನಿಸಲಾಯಿತು. ಡಾ. ಮಂಜುನಾಥ ಕಮ್ಮಾರ ಕ್ರೀಡಾ, ಸಾಂಸ್ಕೃತಿಕ ಚುನಾವಣಾ ಸಾಕ್ಷರತಾ ಪ್ರಮಾಣಪತ್ರ ವಿತರಿಸಿದರು, ಎಚ್.ಎಸ್. ಸಣ್ಣಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌತಮಿ ಮತ್ತು ಸಂಗಡಿಗರು ಪ್ರಾರ್ಥನೆ ಮಾಡಿದರು, ಡಿ. ಶಿವಪ್ಪ ಸ್ವಾಗತಿಸಿದರು, ಡಾ. ಬಿ.ಎಸ್. ಚಿಕ್ಕಣ್ಣ ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ