ಬ್ಯಾಡಗಿ: ಇತ್ತೀಚಿನ ದಿನಗಳಲ್ಲಿ ಯುವಕರ ಮುಂದಿನ ಉದ್ದೇಶ ಸಮಾಜ ಮತ್ತ ಸರ್ಕಾರಕ್ಕೆ ಸರಿಯಾಗಿ ಅರ್ಥವಾಗುತ್ತಿಲ್ಲ, ಕನಿಷ್ಟ ಸಮಾಜಮುಖಿ ಎನಿಸಿಕೊಳ್ಳಲು ಯುವಕರು ಸ್ವಯಂಪ್ರೇರಣೆಯಿಂದ ಸತ್ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರಾಚಾರ್ಯ ಡಾ. ಎಸ್.ಜಿ.ವೈದ್ಯ ಕರೆ ನೀಡಿದರು.
ತಾಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ಬ್ಯಾಡಗಿ ಬಿಇಎಸ್‌ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಳೆದ 10 ದಿನಗಳಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯಡಿ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.45 ರಷ್ಟು ಯುವಕರಿದ್ದಾರೆ, ಆದರೆ ಅವರೆಲ್ಲರೂ ದೇಶದ ಅಭಿವೃದ್ಧಿ ಪಥದತ್ತ ನಡೆಯುವ ಎಲ್ಲ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಜವಾಬ್ಧಾರಿಯುತ ನಾಗರಿಕರಾಗಬೇಕಾದ ಅಗತ್ಯವಿದೆ ಎಂದರು.
ಗ್ರಾಮೀಣ ಪ್ರದೇಶ ಅಭಿವೃದ್ಧಿ ಮತ್ತು ಸಂಘಟನೆ ಗಟ್ಟಿಗೊಳಿಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಉದ್ಧೇಶ, ಹಳ್ಳಿಗಳು ಉದ್ಧಾರವಾದರೆ ದಿಲ್ಲಿ ಉದ್ಧಾರವಾದೀತು ಎಂಬುದಾಗಿ ಹೇಳಿದ ಮಹಾತ್ಮ ಗಾಂಧೀಜಿಯವರು ಹಳ್ಳಿಗಳ ಅಭಿವೃದ್ಧಿ ಚಿಂತನೆಗಳಿಂದ ಉತ್ತಮ ಕೆಲಸ ಮಾಡುವಂತೆ ಏಳು ದಶಕಗಳ ಹಿಂದೆಯೇ ಕರೆ ನೀಡಿದ್ದನ್ನು ನಾವ್ಯಾರೂ ಮರೆಯಬಾರದು ಎಂದರು.ಎನ್ನೆಸ್ಸಸ್ಸ್ ಸಂಯೋಜನಾಧಿಕಾರಿ ಡಾ. ಎನ್.ಎಸ್. ಪ್ರಶಾಂತ್ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕಾಗಿ ಸಾಮಾಜಿಕ ಸೇವೆ ಮಾಡುವಂತಹ ಅಗತ್ಯವಿದೆ, ಯುವಕರು ತಿಳಿದೋ ತಿಳಿಯದೆಯೋ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಹೀಗಾಗಿ ಎನ್‌ಎಸ್‌ಎಸ್ ಯೋಜನೆ ಮಹತ್ವ ಅರಿಯುವ ಮೂಲಕ ಯುವಕರು ಸಂಘಟಿತರಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಉತ್ತಮ ಪರಿಸರ ನಿರ್ಮಾಣ:ಉಪನ್ಯಾಸಕ ಡಾ. ಪ್ರಭುಲಿಂಗ ದೊಡ್ಮನಿ ಮಾತನಾಡಿ, ಜನರನ್ನು ಜಾಗೃತಿಗೊಳಿಸುವ ಮೂಲಕ ಉತ್ತಮ ಪರಿಸರ ನಿರ್ಮಾಣ, ಶುಚಿತ್ವ, ಆರೋಗ್ಯ, ಆಹಾರ ಕುರಿತು ವಿಶೇಷ ಮುತುವರ್ಜಿ ವಹಿಸಿಕೊಂಡು ಸ್ವತಃ ತಾವೇ ಮುಂದೆ ನಿಂತು ಸಾಧಿಸಿ ತೋರಿಸುವ ಬದ್ಧತೆ ಯುವಕರು ಹೊಂದಬೇಕು, ರಾಷ್ಟ್ರೀಯ ಸೇವಾಯೋಜನೆ ಈ ನಿಟ್ಟಿನಲ್ಲಿ ಹಲವು ಉತ್ತಮ ಅಂಶ ಮುಂದಿಟ್ಟುಕೊಂಡು ಗ್ರಾಮೀಣ ಪ್ರದೇಶದಲ್ಲಿ ಜನಜಾಗೃತಿ ಮೂಡಿಸುವುದರ ಜತೆಗೆ ಪರಿಸರ ಉತ್ತಮವಾಗಿಡುವಲ್ಲಿ ಪ್ರಯತ್ನಿಸುತ್ತಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ವಿರೇಶ ಅಂಗಡಿ, ಪಿಎಲ್‌ಡಿ ಮಾಜಿ ನಿರ್ದೇಶಕ ಮಹದೇವಪ್ಪ ಶಿಡೇನೂರ, ಚನ್ನಬಸಪ್ಪ ಬ್ಯಾಡಗಿ, ಬಸಯ್ಯ ಹಿರೇಮಠ, ಎಳುಕೋಟೆಪ್ಪ ಕುಡಪಲಿ, ಮರಡೆಪ್ಪ ಶಿಡೇನೂರ, ಮುಖ್ಯಶಿಕ್ಷಕ ಗುರುರಾಜ ಚಂದ್ರಿಕೇರ, ರೇವಣ್ಣಸಿದ್ದಪ್ಪ ಮಜ್ಜಗಿ, ಉಪನ್ಯಾಸಕ ಸುರೇಶಕುಮಾರ ಪಾಂಗಿ, ಶಶಿಧರ ಮಾಗೋಡ, ಪ್ರಶಾಂತ ಜಂಗಳೇರ, ಪ್ರವೀಣ ಬಿದರಿ, ನಿಂಗಪ್ಪ ಕುಡುಪಲಿ, ಮಲ್ಲಿಕಾರ್ಜುನ ಕೋಡಿಹಳ್ಳಿ, ಸಂತೋಷ ಉದ್ಯೋಗಣ್ಣನವರ ಸೇರಿದಂತೆ ಇನ್ನಿತರರಿದ್ದರು.