ಮಂಗಳೂರಿಗೆ ಶೀಘ್ರ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲು: ಸಚಿವ ಸೋಮಣ್ಣ

KannadaprabhaNewsNetwork |  
Published : Apr 13, 2025, 02:05 AM IST
ಮಂಗಳೂರು-ಕಬಕ ಪುತ್ತೂರುನಿಂದ ಸುಬ್ರಹ್ಮಣ್ಯ ಮಾರ್ಗ ವಿಸ್ತರಿತ ರೈಲಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಹಸಿರು ನಿಶಾನೆ ತೋರಿಸುತ್ತಿರುವುದು  | Kannada Prabha

ಸಾರಾಂಶ

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಶನಿವಾರ ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್‌ ಪ್ಯಾಸೆಂಜರ್‌ ರೈಲಿನ ಸುಬ್ರಹ್ಮಣ್ಯ ರೋಡ್‌ ನಿಲ್ದಾಣ ವರೆಗಿನ ವಿಸ್ತರಣೆಗೆ ಕೇಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ಹಸಿರು ನಿಶಾನೆ ನೀಡಿದರು.

ಮಂಗಳೂರು- ಕಬಕ ಪುತ್ತೂರು ರೈಲು ಸುಬ್ರಹ್ಮಣ್ಯ ಮಾರ್ಗ ವಿಸ್ತರಣೆಗೆ ಚಾಲನೆ

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶದಲ್ಲಿ ಸುಮಾರು ಒಂದೂವರೆ ತಿಂಗಳಲ್ಲಿ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲು ಬರಲಿದ್ದು, ಅದರಲ್ಲಿ ಒಂದನ್ನು ಮಂಗಳೂರಿಗೆ ನೀಡಲಾಗುವುದು ಎಂದು ಕೇಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಶನಿವಾರ ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್‌ ಪ್ಯಾಸೆಂಜರ್‌ ರೈಲಿನ ಸುಬ್ರಹ್ಮಣ್ಯ ರೋಡ್‌ ನಿಲ್ದಾಣ ವರೆಗಿನ ವಿಸ್ತರಣೆಗೆ ಹಸಿರು ನಿಶಾನೆ ನೀಡಿ ಅವರು ಮಾತನಾಡಿದರು.

ಹಾಸನ- ಮಂಗಳೂರು ರೈಲು ಮಾರ್ಗದಲ್ಲಿ ಸಕಲೇಶಪುರದಿಂದ ಸುಬ್ರಹ್ಮಣ್ಯ ಮಾರ್ಗ ವರೆಗೆ ಹೊಸ ಲೈನ್‌ ರಚನೆಗೆ 2 ಸಾವಿರ ಕೋಟಿ ರು.ಗಳ ಡಿಪಿಆರ್‌ಗೆ ಸೂಚಿಸಲಾಗಿದೆ. ಇಲ್ಲಿ ರೈಲ್ವೆ ಹಾಗೂ ರಸ್ತೆ ಮಾರ್ಗ ಜೊತೆ ಜೊತೆಯಾಗಿ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಜೊತೆ ಸಭೆ ನಡೆಸಲಾಗಿದೆ. ಜಮ್ಮು ಕಾಶ್ಮೀರ ಮಾದರಿಯಲ್ಲಿ ಸುರಂಗ ಮಾರ್ಗ ಮಾಡುವ ಆಲೋಚನೆ ಇದೆ. ಇದು ಪೂರ್ಣಗೊಂಡರೆ ಮಂಗಳೂರು-ಬೆಂಗಳೂರು ನಡುವೆ ಎರಡು ವಂದೇ ಭಾರತ್‌ ರೈಲು ಓಡಾಟ ನಡೆಸಿದರೂ ಅಚ್ಚರಿ ಇಲ್ಲ ಎಂದರು.

ರೈಲು ಸುರಕ್ಷತೆಯ ನಿಟ್ಟಿನಲ್ಲಿ ಸಾಕಷ್ಟುಸುಧಾರಣೆಗಳು ಆಗಿದ್ದು, ಅವಘಡಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿದೆ. ಹಾಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ‘ಕವಚ್‌’ ಎನ್ನುವ ಹೊಸ ಯೋಜನೆಯನ್ನು ಸಮರ್ಪಣೆ ಮಾಡಿದ್ದಾರೆ. 10,000 ಕಿ.ಮೀ. ವ್ಯಾಪ್ತಿಯಲ್ಲಿ ಈ ಕವಚ್‌ ಅಳವಡಿಕೆಯಾಗುತ್ತಿದ್ದು, ಕರ್ನಾಟಕದಲ್ಲಿ 1,800 ಕಿ.ಮೀ. ವ್ಯಾಪ್ತಿಯಲ್ಲಿ ಕವಚ್‌ ಒಂದೂವರೆ ವರ್ಷದಲ್ಲಿ ಅಳವಡಿಕೆಯಾಗಲಿದೆ ಎಂದರು.

ಕ್ರೀಡಾ ಕೋಟಾದಲ್ಲೂ ನೇಮಕಾತಿ:

ಮುಖ್ಯವಾಗಿ ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವಂತೆ ಹಲವು ವರ್ಷಗಳಿಂದ ಕನ್ನಡಪರ ಸಂಘಟನೆಗಳು ಬೇಡಿಕೆ ಇರಿಸಿದ್ದವು. ಈಗ ಪ್ರಧಾನಿಯವರು ಕನ್ನಡ ಸಹಿತ 10 ಭಾಷೆಗಳಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆಗೆ ಅವಕಾಶ ಕಲ್ಪಿಸಿದ್ದಾರೆ. ಅಲ್ಲದೆ ಕ್ರೀಡಾ ಕೋಟಾದಲ್ಲೂ ನೇಮಕಾತಿಗೆ ಅವಕಾಶ ಲಭಿಸಿದೆ ಎಂದರು.

ರೈಲ್ವೆ ಸೇತುವೆಗೆ ಇಲಾಖೆಯದ್ದೇ ನೆರವು: ಸ್ಥಳೀಯವಾಗಿ ಲೆವೆಲ್‌ ಕ್ರಾಸಿಂಗ್‌ ಸಮಸ್ಯೆಗಳನ್ನೂ ಬಗೆಹರಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಮೂರು ತಿಂಗಳಿಗೊಮ್ಮೆ ಹೊಸ ರೂಪುರೇಷೆಯೊಂದಿಗೆ ಡಿಆರ್‌ಎಂ ಮುಖ್ಯಸ್ಥರೊಂದಿಗೆ ಜನಪ್ರತಿನಿಧಿಗಳ ಸಭೆ ನಡೆಸಲು ಕ್ರಮ ವಹಿಸಲಾಗುವುದು. ಕರ್ನಾಟಕದ ರೈಲ್ವೇ ಅಭಿವೃದ್ಧಿಯಲ್ಲಿ ಹೊಸ ಶಖೆ ಆರಂಭವಾಗಿದೆ. ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರವೇ ಸಂಪೂರ್ಣ ಅನುದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.

2 ವರ್ಷದಲ್ಲಿ ವಿಶ್ವ ದರ್ಜೆ ನಿಲ್ದಾಣ:

ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯ 19 ಕೋಟಿ ರು. ಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆಗಸ್ಟ್‌ನೊಳಗೆ ಸಂಪೂರ್ಣ ಕಾಮಗಾರಿ ಮುಕ್ತಾಯವಾಗಲಿದೆ. ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಮಾಸ್ಟರ್‌ ಪ್ಲಾನ್‌ ತಯಾರಾಗಿದ್ದು, ಟೆಂಡರ್‌ ಕರೆದು ಎರಡು ವರ್ಷಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ವಿದ್ಯುದೀಕರಣ ಬಳಿಕ ಮೆಮು ಸಂಚಾರ:

ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಅಮೃತ್‌ ಭಾರತ್‌ ಯೋಜನೆಯಡಿ 24 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಭಕ್ತಾದಿಗಳ ತಾಣವಾಗಿರುವ ಆ ನಿಲ್ದಾಣದಲ್ಲಿ ವಿಕಲಚೇತನರಿಗೂ ಪೂರಕವಾಗಿ ಎಕ್ಸಲೇಟರ್‌ ವ್ಯವಸ್ಥೆ ಮಾಡಲಾಗುತ್ತಿದ್ದು, ಸೆಪ್ಟಂಬರ್‌ 25ರೊಳಗೆ ಈ ಎಲ್ಲ ಕಾಮಗಾರಿಗಳು ಪೂಣಗೊಳ್ಳಲಿವೆ. ಮಂಗಳೂರು-ಸುಬ್ರಹ್ಮಣ್ಯ ಮಾರ್ಗ ನಡುವಿನ ವಿದ್ಯುದೀಕರಣದ ಎಲ್ಲ ಕಾಮಗಾರಿ ಪೂರ್ಣಗೊಂಡ ಬಳಿಕ ಮೆಮು ರೈಲು ಸಂಚಾರ ಆರಂಭಗೊಳ್ಳಲಿದೆ ಎಂದರು.

ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಮಾತನಾಡಿ, ನಗರ ಅಭಿವೃದ್ಧಿಗೆ ಸಂವಹನದ ಜತೆಗೆ ಸಂಪರ್ಕ ವ್ಯವಸ್ಥೆ ಉತ್ತಮವಾಗಿರಬೇಕು. ಈ ನಿಟ್ಟಿನಲ್ಲಿ ಪುಣ್ಯ ಕ್ಷೇತ್ರವಾದ ಸುಬ್ರಹ್ಮಣ್ಯಕ್ಕೆ ರೈಲು ಸಂಚಾರ ವಿಸ್ತರಿಸುವ ಮೂಲಕ ಉತ್ತಮ ಕಾರ್ಯವಾಗಿದೆ ಎಂದರು.

ಪರ್ಯಾಯ ವ್ಯವಸ್ಥೆ ಮಾಡಿ ಗೇಟ್‌ ಬಂದ್‌ ಮಾಡಿ:

ರೈಲ್ವೆ ಕ್ರಾಸಿಂಗ್‌ಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಗೇಟ್‌ ಅಳವಡಿಸುವ ಕಾರ್ಯ ಸಮಂಜಸವಾಗಿದ್ದರೂ, ಹಿಂದಿನ ವ್ಯವಸ್ಥೆ ಬದಲಾವಣೆ ಮಾಡುವ ವೇಳೆ ಸ್ಥಳೀಯರ ಗಮನಕ್ಕೆ ತಂದು, ಪರ್ಯಾಯ ವ್ಯವಸ್ಥೆ ಕೈಗೊಂಡ ಬಳಿಕವೇ ಕ್ರಮ ವಹಿಸಬೇಕು. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅವರು ಹೇಳಿದರು.

ಸಭೆ ಕರೆಯುವ ಜವಾಬ್ದಾರಿ ಡಿಆರ್‌ಎಂಗೆ ವಹಿಸಿ: ದ.ಕ. ಸಂಸದ ಬ್ರಿಜೇಶ್‌ ಚೌಟ ಮಾತನಾಡಿ, ಒಂದು ಕಾಲದಲ್ಲಿ ಮಂಗಳೂರು ಸುಬ್ರಹ್ಮಣ್ಯ ನಡುವೆ ಓಡಾಡುತ್ತಿದ್ದ ರೈಲನ್ನು ಮತ್ತೆ ಪುನರಾರಂಭಿಸಲು ಹೋರಾಟ ಮಾಡಬೇಕಾದ ಪರಿಸ್ಥಿತಿ ದ.ಕ. ಜಿಲ್ಲೆಯ ಜನರದ್ದಾಗಿತ್ತು. ಹೊಸ ರೈಲುಗಳು ಜಿಲ್ಲೆಗೆ ಬರುವುದು ದುಸ್ತರ ಎನ್ನುವ ಸಂದರ್ಭದಲ್ಲಿಯೇ ಮಂಗಳೂರು-ಕಬಕ ಪುತ್ತೂರು ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಿಸಲು ಸಚಿವ ಸೋಮಣ್ಣ ರವರ ಮುತುವರ್ಜಿಯಿಂದ ಸಾಧ್ಯವಾಗಿದೆ. ಹಳಿಯ ವಿದ್ಯುದೀಕರಣ ಸಂಪೂರ್ಣಗೊಂಡ ಬಳಿಕ ಇದನ್ನು ಮೆಮೋ ರೈಲು ಆಗಿ ಪರಿವರ್ತನೆಗೊಳಿಸಬೇಕು ಎಂದರು.ಮಂಗಳೂರು ಬೆಂಗಳೂರು ನಡುವೆ ಹೆದ್ದಾರಿ ಇಲಾಖೆ ಜತೆ ಸಮಾಲೋಚನೆ ಮಾಡಿಕೊಂಡು ರೈಲು ಹಾಗೂ ರಸ್ತೆ ಕಾಮಗಾರಿಯನ್ನು ಜತೆಯಾಗಿ ಶಿರಾಡಿ ಘಾಟ್‌ ಮೂಲಕ ಮಾಡುವ ಕಾರ್ಯ ಆಗಬೇಕು. ಡಿಆರ್‌ಎಂಗಳ ಸಭೆಯನ್ನು ಮೂರು ತಿಂಗಳಿಗೊಮ್ಮೆ ಸಮರ್ಪಕವಾಗಿ ನಡೆಸಲು ಜವಾಬ್ದಾರಿಯನ್ನು ಸಂಬಂಧಪಟ್ಟವರಿಗೆ ವಹಿಸಬೇಕು ಎಂದು ಅವರು ಸಚಿವರನ್ನು ವಿನಂತಿಸಿದರು.

ಶಾಸಕರಾದ ವೇದವ್ಯಾಸ ಕಾಮತ್‌, ಡಾ. ಭರತ್‌ ಶೆಟ್ಟಿ, ಭಗೀರಥಿ ಮುರುಳ್ಯ, ಮಾಜಿ ಶಾಸಕರಾದ ನಾಗರಾಜ ಶೆಟ್ಟಿ, ಸಂಜೀವ ಮಠಂದೂರು, ಪಾಲ್ಘಾಟ್‌ ವಿಭಾಗದ ಡಿಆರ್‌ಎಂ ಅರುಣ್‌ ಕುಮಾರ್‌ ಚತುರ್ವೇದಿ, ಕೊಂಕಣ ರೈಲ್ವೆ ಆರ್‌ಆರ್‌ಎಂ ಆಶಾ ಶೆಟ್ಟಿ ಮತ್ತಿತರರಿದ್ದರು.

ಹೋರಾಟಗಾರರಲ್ಲಿ ಸಂತಸ: ರೈಲು ವಿಸ್ತರಣೆಗೆ ಹಸಿರು ನಿಶಾನೆ ನೀಡುವ ಸಂದರ್ಭ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಅಪಾರ ಸಂಖ್ಯೆಯ ರೈಲು ಪ್ರಯಾಣಿಕರ ಜತೆ, ರೈಲು ಹೋರಾಟಗಾರರು ಸಾಕ್ಷಿಯಾಗಿ ಸಂತಸ ವ್ಯಕ್ತಪಡಿಸಿದರು.------------------ಸಂಸದ ಚೌಟ ಬಗ್ಗೆ ಸಚಿವ ಸೋಮಣ್ಣ ಪ್ರಶಂಸೆದ.ಕ. ಜಿಲ್ಲೆಯ ಲೋಕಸಭಾ ಸದಸ್ಯ, ಯುವ ಸಂಸದ ಬ್ರಿಜೇಶ್‌ ಚೌಟ ತಮ್ಮ ಜಿಲ್ಲೆಗೆ ಅಗತ್ಯವಾದ ಯಾವುದೇ ಕೆಲಸ ಕಾರ್ಯಗಳನ್ನು ಸಚಿವರ ಬೆನ್ನು ಹತ್ತಿ ಹಠ ಹಿಡಿದು ಮಾಡಿಸುತ್ತಾರೆ. ಇದು ಒಬ್ಬ ಲೋಕಸಭಾ ಸದಸ್ಯನಿಗೆ ಇರಬೇಕಾದ ಒಳ್ಳೆಯ ಲಕ್ಷಣ. ಅಂತಹ ಸಂಸದರನ್ನು ಜಿಲ್ಲೆಯ ಜನತೆ ಪಡೆದಿದ್ದಾರೆ ಎಂದು ಕೇಂದ್ರ ಸಚಿವ ಸೋಮಣ್ಣರವರು ಪ್ರಶಂಸೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''