ಅಂತಾರಾಷ್ಟ್ರೀಯ ಮಾದಕ ದ್ರವ್ಯ ಅಕ್ರಮ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಶ್ರೀಗಳು
ಯುವಜನತೆ ಮಾದಕ ದ್ರವ್ಯ, ವಸ್ತುಗಳಿಂದ ದೂರವಿದ್ದು, ಉತ್ತಮ ಪ್ರಜೆಗಳಾಗಬೇಕು ಎಂದು ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಹೇಳಿದರು.
ಪಟ್ಟಣದ ತರಳ ಬಾಳು ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಅಕ್ರಮ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.ಮಾದಕ ದ್ರವ್ಯ ಸೇವನೆಯಿಂದ ಮನಸ್ಸು ಹಾಗೂ ಮೆದುಳಿನ ಮೇಲೆ ದುಷ್ಪರಿಣಾಮ ಬೀಳುತ್ತದೆ ಹಾಗೂ ಆರೋಗ್ಯ ಹಾಳಾಗುವುದರ ಜತೆಗೆ ಕೌಟುಂಬಿಕ ಸಮಸ್ಯೆ ತಲೆದೋರುತ್ತವೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ, ಅಪರಾಧ ಪ್ರಕರಣಗಳಿಗೆ ಮಾದಕ ದ್ರವ್ಯಗಳು ಬುನಾದಿಯಾಗಿವೆ, ಸಮಾಜದಲ್ಲಿ ಕೆಟ್ಟ ಹೆಸರು ತರುತ್ತವೆ. ಮೊಬೈಲ್ ಒಳ್ಳೆಯದಕ್ಕಿಂತ ಜಾಸ್ತಿ ಕೆಟ್ಟದ್ದಕ್ಕೆ ಉಪಯೋಗವಾಗುತ್ತಿದೆ ಎಂದ ಅವರು, ಜೀವನ ಬದಲಾವಣೆಗೆ ಇಂತಹ ಕಾರ್ಯಕ್ರಮ ಅಗತ್ಯ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಪೃಥ್ವಿ, ಸಿಪಿಐ ಮಹಾಂತೇಶ ಸಜ್ಜನ ಮಾತನಾಡಿದರು. ಜನನಿ ನ್ಯಾಚರೋಪತಿ ಮತ್ತು ಯೋಗ ಕಾಲೇಜಿನ ಉಪನ್ಯಾಸಕಿ ಡಾ. ಕವನ ಉಪನ್ಯಾಸ ನೀಡಿದರು. ಹಡಗಲಿ ತಾಲೂಕಿನ ಅಂಗೂರು ಗ್ರಾಮದ ಕೆ.ಸಿ. ಪರಶುರಾಮ ಹಾಗೂ ಸಂಗಡಿಗರು ಜನ ಜಾಗೃತಿ ಗೀತೆಗಳು ಮತ್ತು ಕಿರು ನಾಟಕ ಪ್ರದರ್ಶಿಸಿದರು.