ಕನ್ನಡಪ್ರಭ ವಾರ್ತೆ ಅಥಣಿ
ಜೈನ ಸಮುದಾಯದ ಗಣತಿಯ ಅಂಕಿ ಸಂಖ್ಯೆಯು ತಪ್ಪಾಗಿದ್ದು, ನಿಷ್ಪಕ್ಷಪಾತವಾಗಿ ಮರುಗಣತಿಯಾಗಬೇಕು. ರಾಜ್ಯಾದ್ಯಂತ ಜೈನ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ವಾಸ್ತವಿಕ ಅಂಕಿ ಅಂಶವನ್ನು ದಾಖಲಿಸಬೇಕು ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಆಚಾರ್ಯ ರತ್ನ 108 ಕುಲರತ್ನ ಭೂಷಣ ಮನಿ ಮಹಾರಾಜರು ನುಡಿದರು.ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯಾದ್ಯಂತ 25 ಲಕ್ಷದಿಂದ 30 ಲಕ್ಷದವರೆಗೆ ಜೈನ ಸಮುದಾಯವಿದೆ. ಕಡಿಮೆ ಜನಸಂಖ್ಯೆಯನ್ನು ತೋರಿಸಿರುವುದು ನೋವು ತಂದಿದೆ. ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಜೈನ ಸಮಾಜಕ್ಕೆ ದೊರೆಯಬೇಕಾದ ಸೌಲಭ್ಯಗಳನ್ನು ಯಾವುದೇ ಸರ್ಕಾರವಿದ್ದರೂ ಒದಗಿಸಬೇಕು. ಎಲ್ಲರೊಂದಿಗೆ ಸಮಾನ ಮನಸ್ಕಾರಾಗಿ ಸಾಗುವ ಜೈನ ಧರ್ಮಕ್ಕೆ ಅನ್ಯಾಯವಾಗಬಾರದು. ಸಾತ್ವಿಕ ಆಹಾರ ವಿಚಾರಗಳೊಂದಿಗೆ ಅಹಿಂಸಾ ಧರ್ಮವನ್ನೇ ಪರಿಪಾಲಿಸಿಕೊಂಡ ಬಂದ ಜೈನ ಧರ್ಮ ಎಲ್ಲರಿಗೂ ಒಳಿತನ್ನೇ ಬಯಸುತ್ತದೆ. ಸರ್ಕಾರಕ್ಕೆ ಮರುಗಣತಿ ಮಾಡಲು ಆಗದಿದ್ದರೇ ಜೈನ ಸಮುದಾಯದ ಮೂಲಕವೇ ಮರುಗಣತಿ ಮಾಡಿ ಸರಿಯಾದ ಅಂಕಿ ಅಂಶಗಳನ್ನು ಸರ್ಕಾರಕ್ಕೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಜೈನ್ ಸಂಘಟನೆಯ ರಾಜ್ಯ ಸಂಚಾಲಕ ಅರುಣ ಯಲಗುದ್ರಿ, ಬಾಬಾಸಾಹೇಬ್ ಪಾಟೀಲ, ದೀಪಕ ಪಾಟೀಲ, ವಿವೇಕಾನಂದ ಯಲಗುದ್ರಿ, ಅಶೋಕ ಮುಗ್ಗನವರ, ಅಮರ ದುರ್ಗಣ್ಣವರ, ಮಲ್ಲು ಪಾಸಾಣಿ, ಮಹಾವೀರ ಶಿರಹಟ್ಟಿ, ಲಕ್ಷ್ಮಣ ಚಿಪ್ಪಾಡಿ, ಕುಮಾರ ಪಾಸಾಣಿ, ಬಸಗೊಂಡ ಮುಗ್ಗನವರ, ಜಿನ್ನು ನಂದಾಗಾಂವ, ಮಲ್ಲಪ್ಪ ಶಿರಹಟ್ಟಿ, ಬಸಗೊಂಡ ಝುಂಜರವಾಡ, ಅಶೋಕ ಹಳಿಂಗಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಜೈನ ಸಮುದಾಯದವರು ಧರ್ಮ ಹಾಗೂ ಜಾತಿ ಬರೆಸುವಾಗ ಜೈನ ಎಂದೇ ಬರೆಸಬೇಕು. ಶ್ವೇತಾಂಬರ ಹಾಗೂ ದಿಗಂಬರ ಎಂದು ಬರೆಸಿ ಗೊಂದಲವನ್ನುಂಟು ಮಾಡಬಾರದು. ಸರ್ಕಾರ ಜನಗಣತಿಯ ಸಂಖ್ಯೆಯನ್ನು ಸರಿಪಡಿಸಿ ನ್ಯಾಯ ಒದಗಿಸುವ ಭರವಸೆ ಇದೆ.ಆಚಾರ್ಯ ರತ್ನ 108 ಕುಲರತ್ನ ಭೂಷಣ ಮನಿ ಮಹಾರಾಜರು, ಹಳಿಂಗಳಿ ಭದ್ರಗಿರಿ ಬೆಟ್ಟ.