ಬಂಟ್ವಾಳ ತಾಲೂಕಿಗೆ ಸುಸಜ್ಜಿತ ಕ್ರೀಡಾಂಗಣಕ್ಕೆ ಸಂಘಟಿತ ಪ್ರಯತ್ನವಾಗಲಿ: ವಾಸು ಪೂಜಾರಿ

KannadaprabhaNewsNetwork |  
Published : Nov 02, 2024, 01:34 AM IST
11 | Kannada Prabha

ಸಾರಾಂಶ

ಪೊಲೀಸ್ ಇಲಾಖೆ- ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನಲ್ಲಿ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕಿಗೆ ಸುಸಜ್ಜಿತ ಕ್ರೀಡಾಂಗಣದ ಅಗತ್ಯತೆ ಎದ್ದು ಕಾಣುತ್ತಿದ್ದು, ಎಲ್ಲಜನಪ್ರತಿನಿಧಿಗಳ ಸಂಘಟಿತ ಪ್ರಯತ್ನ ನಡೆಯಬೇಕು ಎಂದು ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ ಹೇಳಿದ್ದಾರೆ. ಬಿ.ಸಿ. ರೋಡಿನ ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ನಡೆದ ಬಂಟ್ವಾಳ ತಾಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲ ಜನಪ್ರತಿನಿಧಿಗಳು ರಾಜಕೀಯ ಬಿಟ್ಟು ಕಾರ್ಯೋನ್ಮುಖರಾಗಿ ಮುಂದಿನ ರಾಜ್ಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಕುರಿತು ಶುಭ ಸುದ್ದಿ ಬರುವಂತಾಗಬೇಕು ಎಂದವರು ಹೇಳಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡರು. ಪ್ರಭಾರ ತಹಸೀಲ್ದಾರ್ ಅರವಿಂದ್ ಕೆ.ಎಂ. ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿ, ಕನ್ನಡವು ಭಾಷೆಯ ಜತೆಗೆ ನಮ್ಮ ಭಾವನೆಯಾಗಿದ್ದು, ಕನ್ನಡ ಬಿಟ್ಟು ಆಂಗ್ಲ ಮಾಧ್ಯಮ ಬೋಧನೆ ಸರಿಯಲ್ಲ. ಯಾವುದೇ ಮಾಧ್ಯಮದ ಶಿಕ್ಷಣವಾದರೂ ಕನ್ನಡ ಅದರ ಜತೆಗಿರಬೇಕು. ಭಾಷೆಯ ಉತ್ತೇಜನ ಯಾವತ್ತೂ ಕಡಿಮೆಯಾಗಬಾರದು ಎಂದರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಪೋಷಕರು ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿ ಮಾಡಿ ಸಮಾಜಕ್ಕೆ ಅರ್ಪಿಸಬೇಕು ಎಂದರು.

ವಾಮದಪದವು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಅಂಕಿತಾ ಪ್ರಧಾನ ಭಾಷಣ ಮಾಡಿ, ನಾವು ಯಾವುದೋ ಭಾಷೆಯಲ್ಲಿ ಮಾತನಾಡಿ ಕನ್ನಡವನ್ನು ಉಳಿಸುವುದು ಅಸಾಧ್ಯವಾಗಿದ್ದು, ಕನ್ನಡ ಮಾತನಾಡಿದಾಗಲೇ ಅದು ಉಳಿವು ಸಾಧ್ಯವಾಗುತ್ತದೆ ಎಂದರು.ಗ್ಯಾರಂಟಿ ಅನುಷ್ಠಾನ ಸಮಿತಿಯ ಬಂಟ್ವಾಳ ತಾಲೂಕು ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಉಪಸ್ಥಿತರಿದ್ದರು. ತಾಲೂಕಿನ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ತಾ.ಪಂ.ಅನುದಾನದಲ್ಲಿ ಟಿ-ಶರ್ಟ್ ವಿತರಿಸಲಾಗಿದ್ದು, ಶಿಕ್ಷಕ ಜಯರಾಮ್ ಮಕ್ಕಳ ವಿವರ ನೀಡಿದರು.

ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್‌ ಕುಮಾರ್ ಸ್ವಾಗತಿಸಿದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ವಂದಿಸಿದರು. ಉಪ ತಹಸೀಲ್ದಾರ್‌ ನವೀನ್‌ ಕುಮಾರ್‌ ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ಪೊಲೀಸ್ ಇಲಾಖೆ- ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ