ಕನ್ನಡಪ್ರಭ ವಾರ್ತೆ ಮಂಡ್ಯ
ಪಕ್ಷಾತೀತವಾಗಿ ಕೆಲಸ ಮಾಡುತ್ತಿರುವ ಶಾಸಕ ಪಿ.ರವಿಕುಮಾರ್ ಅವರನ್ನು ತೇಜೋವಧೆ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಅಭಿವೃದ್ಧಿ ಕೆಲಸದ ಬಗ್ಗೆ, ಶಾಸಕರ ಕಾರ್ಯವೈಖರಿ ಬಗ್ಗೆ ಆಕ್ಷೇಪಗಳಿದ್ದರೆ ಹೇಳಲಿ. ಕಾಮಗಾರಿ ನೀಡುವುದರಲ್ಲೂ ಶಾಸಕರು ಪಕ್ಷಬೇಧ ಮಾಡುತ್ತಿಲ್ಲ. ಜೆಡಿಎಸ್ ಪಕ್ಷದವರಿಗೆ ಎಷ್ಟು ಟೆಂಡರ್ ಕಾಮಗಾರಿಗಳನ್ನು ನೀಡಿದ್ದೇವೆ ಎಂಬ ಬಗ್ಗೆ ಪಟ್ಟಿ ಕೊಡುವುದಕ್ಕೂ ಸಿದ್ಧರಿದ್ದೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಸೈಕೋ ಎಂದು ಹೇಳುವ ಅಗತ್ಯವಿರಲಿಲ್ಲ. ಮಾತಿನ ಭರದಲ್ಲಿ ಅದನ್ನು ಹೇಳಿರಬಹುದು. ಆದರೆ, ಕೇಂದ್ರ ಸಚಿವರಾದ ಮೂರೂವರೆ ವರ್ಷದಲ್ಲಿ ಜಿಲ್ಲೆಗೆ ಅವರು ನೀಡಿರುವ ಕೊಡುಗೆ ಏನು. ಕೈಗಾರಿಕೆ ತರುವುದಕ್ಕೆ ಇಷ್ಟು ವರ್ಷ ಬೇಕೆ. ಒಮ್ಮೆ ಕೈಗಾರಿಕೆ ಸ್ಥಾಪನೆಗೆ ನೂರು ಎಕರೆ ಕೇಳುವುದು. ರಾಜ್ಯ ಸರ್ಕಾರ ಕೇಂದ್ರ ಸಚಿವರ ಮನವಿಗೆ ಸ್ಪಂದಿಸಿ ನೂರು ಎಕರೆ ಕೊಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ ಮೇಲೆ ರಾಜ್ಯ ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆದಾಗ ಐನೂರು ಎಕರೆ ಭೂಮಿ ಕೇಳುವುದು. ಅಭಿವೃದ್ಧಿ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸದೆ ಹುಡುಗಾಟ ಆಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.ಮೂರೂವರೆ ವರ್ಷದಲ್ಲಿ ರಾಜ್ಯದಲ್ಲಿ ಯಾವ ಕೈಗಾರಿಕೆ ಅಥವಾ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿದ್ದಾರೆ, ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ, ಹೊಸ ಕೈಗಾರಿಕೆಗಳನ್ನು ಎಲ್ಲೆಲ್ಲಿ ಸ್ಥಾಪಿಸಿದ್ದಾರೆ ಹೇಳಲಿ. ಎಲ್ಲೆಡೆ ಕೇಂದ್ರ ಸಚಿವರ ಸಾಧನೆ ಶೂನ್ಯವೇ ಕಾಣಿಸುತ್ತಿದೆ. ಸಿಎಸ್‌ಆರ್ ಅನುದಾನ ತಂದಿರುವುದನ್ನು ದೊಡ್ಡದಾಗಿ ಬಿಂಬಿಸಿಕೊಳ್ಳುವುದು ಅವರ ಘನತೆಗೆ, ಹುದ್ದೆಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ನೀವು ಎರವಲು ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರವನ್ನು ಪ್ರವೇಶಿಸಿದವರು. ಪಿ.ರವಿಕುಮಾರ್ ಅವರನ್ನು ಜನರು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಅವರೂ ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸುತ್ತಿದ್ದಾರೆ. ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ನಿರಂತರವಾಗಿ ಮುಂದುವರೆಸಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಮೂರೂವರೆ ವರ್ಷಗಳ ಬಳಿಕ ಪ್ರತ್ಯಕ್ಷರಾಗಿ ಸುಳ್ಳು-ಆರೋಪಗಳನ್ನು ಮಾಡುತ್ತಿರುವುದನ್ನು ಖಂಡಿಸುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ವಿಜಯಲಕ್ಷ್ಮೀ, ನಹೀಂ, ವಿಜಯಕುಮಾರ್, ರುದ್ರಪ್ಪ, ಸುಮನ್ ಇದ್ದರು.