ದೇಶದೊಳಗೆ ಧರ್ಮಮಯ ವಾತಾವರಣ ಮೂಡಲಿ: 108 ಶ್ರೀ ಅಮೋಘಕೀರ್ತಿ ಮಹಾರಾಜರು

KannadaprabhaNewsNetwork |  
Published : Feb 23, 2024, 01:53 AM IST
೧೧ | Kannada Prabha

ಸಾರಾಂಶ

ವೇಣೂರಿನಲ್ಲಿ ಭಗವಾನ್ ಶ್ರೀಬಾಹುಬಲಿ ಸ್ವಾಮಿಗೆ 9 ದಿನಗಳ ಕಾಲ ನಡೆಯಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಮೊದಲನೆ ದಿನವಾದ ಗುರುವಾರ ನಡೆದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವದಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಯೋಗ ಚಕ್ರವರ್ತಿಯ ಮಹಾಮಸ್ತಕಾಭಿಷೇಕದಿಂದ ಸಮಗ್ರ ದೇಶದೊಳಗೆ ಧರ್ಮಮಯ ವಾತಾವರಣ ಮೂಡಲಿ, ಸಂಸ್ಕಾರದ ಬೀಜಾರೋಪಣವಾಗಲಿ, ಜೈನ ಧರ್ಮದ ಪ್ರಭಾವ ಅಧಿಕವಾಗಲಿ ಎಂದು ಯುಗಳ ಮುನಿಶ್ರೀಗಳಲ್ಲಿ ಒಬ್ಬರಾದ 108 ಶ್ರೀ ಅಮೋಘಕೀರ್ತಿ ಮಹಾರಾಜರು ಆಶೀರ್ವದಿಸಿದರು.

ವೇಣೂರಿನಲ್ಲಿ ಭಗವಾನ್ ಶ್ರೀಬಾಹುಬಲಿ ಸ್ವಾಮಿಗೆ 9 ದಿನಗಳ ಕಾಲ ನಡೆಯಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಮೊದಲನೆ ದಿನವಾದ ಗುರುವಾರ ನಡೆದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವದಿಸಿದರು.

ಇನ್ನೋರ್ವ ಮುನಿಗಳಾದ 108 ಶ್ರೀ ಅಮರಕೀರ್ತಿ ಮಹಾರಾಜರು, ಭರತ- ಬಾಹುಬಲಿಯರ ಚರಿತ್ರೆ ಆದರ್ಶದ, ತ್ಯಾಗದ ಪಾಠ ಕಲಿಸುತ್ತದೆ. ನನ್ನಿಂದ ಯಾರಿಗೂ ಯಾವುದೇ ಕಾರಣಕ್ಕೂ ಕಷ್ಟ, ತೊಂದರೆ ಬರಬಾರದು ಎಂಬ ಭಾವನೆ ನಮ್ಮಲ್ಲಿ ಮೂಡಲು ಪ್ರಾರಂಭಿಸಿದರೆ ನಾವು ಅಹಿಂಸಾವಾದಿಗಳಾಗುತ್ತೇವೆ. ಮನವನ್ನು ಶುದ್ಧ ಮಾಡಿ ಹಿಂಸೆಯನ್ನು ದೂರ ಮಾಡುವ ಮೂಲಕ ಆದರ್ಶಪ್ರಾಯರಾಗಿ ಬಾಳಿ ಬದುಕುವ ಛಲ ಎಲ್ಲರಲ್ಲಿ ಮೂಡಲಿ ಎಂದರು.

ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಸರ್ವರನ್ನು ಪ್ರೀತಿಸುವ ಗುಣವುಳ್ಳ ತುಳುನಾಡಿನಲ್ಲಿ ವೈಷಮ್ಯಗಳಿಲ್ಲ. ಧರ್ಮಸ್ಥಳದ ಹೆಗ್ಗಡೆ ಮತ್ತು ವೇಣೂರಿನ ಅಜಿಲ ಮನೆತನದ ಕಟ್ಟು ಕಟ್ಟಳೆ ಎಲ್ಲರಿಗೂ ಮಾದರಿಯಾಗಿರುವುದು ಹೆಮ್ಮೆಯ ವಿಚಾರ. ಪರಂಪರೆಗೆ ಸಂದ ಗೌರವವನ್ನು ಮುಂದುವರಿಸಿ ವರ್ತಮಾನದಲ್ಲಿ ಭವಿಷ್ಯದ ಅವಲೋಕನ ಮಾಡಬೇಕು ಎಂದು ಆಶೀರ್ವಚನದಲ್ಲಿ ತಿಳಿಸಿದರು.

ವಸ್ತು ಪ್ರದರ್ಶನ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ, ಮುನಿಗಳ ಪಾದಸ್ಪರ್ಶದಿಂದ ಸಾನಿಧ್ಯ ಪಾವನವಾಗಿದೆ ಎಂದರು.

ಆರಿಕಾ ಮಾತೆಯರು, ಸಮಿತಿಯ ಸಂಚಾಲಕ ಡಿ. ಹರ್ಷೇಂದ್ರ ಕುಮಾರ್, ಮಾಜಿ ಸಚಿವರಾದ ಅಭಯ ಚಂದ್ರ ಜೈನ್, ರಮಾನಾಥ ರೈ, ವೇಣೂರು ಗ್ರಾಪಂ ಅಧ್ಯಕ್ಷ ನೇಮಯ್ಯ ಕುಲಾಲ್, ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಜಯರಾಜ ಕಂಬಳಿ ಉಪಸ್ಥಿತರಿದ್ದರು.

ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮ ಪ್ರಸಾದ್ ಅಜಿಲ ಸ್ವಾಗತಿಸಿದರು. ವಿಶ್ರಾಂತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ್ ಅಜಿಲ ವಂದಿಸಿದರು. ವೇಣೂರಿನ ವೈಭವ ಪುಸ್ತಕ ಹಾಗೂ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಕಷ್ಟ ಸುಖ ಅರಿತು, ಜವಾಬ್ದಾರಿಯ ಜೀವನ ಸಾಗಿಸಬೇಕು: ಡಾ. ಹೆಗ್ಗಡೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಮಸ್ತಕಾಭಿಷೇಕ ಸಮಿತಿ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ ಅಭಿಷೇಕದಿಂದ ಭಗವಂತನ ಸ್ವರೂಪ ವರ್ಣಮಯವಾಗುವಂತೆ ಜನರ ಜೀವನವು ಸುಖ ಶಾಂತಿಯಿಂದ ವರ್ಣಮಯವಾಗಲಿ, ಕಷ್ಟ ಸುಖಗಳನ್ನು ಅರಿತು ಜೀವನ ಸಾಗಿಸುವುದರ ಜತೆ ಜವಾಬ್ದಾರಿಗಳನ್ನು ನಿಭಾಯಿಸಿ ಮುನ್ನಡೆಯಬೇಕು. ನಮ್ಮ ಭಕ್ತಿ ಭಾವನೆಗಳು ಇತರರಿಗೆ ಮಾದರಿಯಾಗಬೇಕು. ಹಿರಿಯರ ಬಗ್ಗೆ ಗೌರವ ಭಾವದಿಂದ ಯುವಕರು ಮುಂದೆ ಬಂದು ಸಕಲ ಕಾರ್ಯಗಳಿಗೆ ಸನ್ನದ್ಧರಾಗಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ