ಕನ್ನಡಪ್ರಭ ವಾರ್ತೆ, ತುಮಕೂರು
ಅವರು ಯಾವುದೇ ಜಾತಿ, ಯಾವುದೇ ಧಾರ್ಮಿಕ ಆಚರಣೆ ಅನುಸರಿಸುತ್ತಿರಬಹುದು. ಆದರೆ ಸಂಘಟಿತರಾಗಿ ನಾವೆಲ್ಲಾ ಭಾರತೀಯರಾಗಿ ಒಂದು ಎನ್ನುವ ಭಾವನೆಯನ್ನು ಮೂಡಿಸುವ ಕೆಲಸ ಆಗಬೇಕಾಗಿದೆ. ಹಿಂದೂಗಳಲ್ಲೇ ಹಲವಾರು ಆಚರಣೆಗಳಿಗೆ ನಂಬಿಕೆಗಳು, ಶ್ರದ್ಧಾ ಕೇಂದ್ರಗಳು, ಆಚರಣೆಗಳು ಬೇರೆಬೇರೆ ಇವೆ. ಆದರೆ ಅವರೆಲ್ಲರೂ ಭಾರತೀಯರಾಗಿ ಭಾವೈಕ್ಯತೆಯಿಂದ ಬದುಕಬೇಕು ಎಂಬುದು ಮುಖ್ಯವಾಗಿದೆ. ಸಾಮಾಜಿಕ, ಪರಿಸರ ಕಳಕಳಿ, ನಾಗರಿಕ ಪ್ರಜ್ಞೆ, ಕಾನೂನು ಪಾಲನೆಯಂತಹ ಶಿಷ್ಟಾಚಾರವನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಕಾನೂನು ಮುರಿಯುವಂತಹವರು ಇಂದು ಜಾಸ್ತಿಯಾಗುತ್ತಿದ್ದಾರೆ. ಪಾಲನೆ ಮಾಡುವವರು ಕಡಿಮೆಯಾಗುತ್ತಿದ್ದಾರೆ. ಕಾನೂನನ್ನು ರೂಪಿಸುವುದು ದೊಡ್ಡದಲ್ಲ, ಪಾಲಿಸುವುದು ಅತ್ಯಂತ ಮುಖ್ಯವಾದದ್ದು, ಆ ಹಿನ್ನೆಲೆಯಲ್ಲಿ ಜಾಗೃತಿ ಉಂಟುಮಾಡಬೇಕು ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧಲಿಂಗಸ್ವಾಮೀಜಿ ಹೇಳಿದರು. ಸಮಿತಿ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್ ಮಾತನಾಡಿ, ಹಿಂದೂಗಳು ಒಗ್ಗೂಡಿದಾಗ ದೇಶಕ್ಕೆ ಭವಿಷ್ಯವಿದೆ. ಸಮಾಜದಲ್ಲಿ ಒಗ್ಗಟ್ಟು ಇದ್ದರೆ ದೇಶ ಸದೃಢವಾಗಿ, ಸುಭದ್ರವಾಗಿರುತ್ತದೆ. ಸಮಾಜ, ದೇಶ ನಿರ್ಮಾಣದ ಚಿಂತನೆ, ಹಿಂದೂ ಸಾಂಸ್ಕೃತಿಕ ಮೌಲ್ಯಗಳ ಜಾಗೃತಿಗಾಗಿ ಈ ತಿಂಗಳ 18 ರಿಂದ ನಗರದ ಎಲ್ಲಾ ವಸತಿ ಬಡಾವಣೆಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಹಿಂದೂ ಸಮಾಜೋತ್ಸವಗಳನ್ನು ಆಯೋಜಿಸಲಾಗುತ್ತಿದೆ ಎಂದರು.ಸಮಾಜದ ನಡುವೆ ಒಡಕು ಮೂಡಿಸುವ ಹುನ್ನಾರ, ಅಸಮಾನತೆ, ಅಧಾರ್ಮಿಕ ಮನೋಭಾವ ಹಾಗೂ ಅಪಸ್ವರಗಳನ್ನು ಹೋಗಲಾಡಿಸಿ ಸದೃಢ ಸಮಾಜ ನಿರ್ಮಿಸುವ ಅನಿವಾರ್ಯತೆ ಈಗ ಬಂದಿದೆ. ನೆಲ, ಜಲ, ಹಸಿರು ಮುಂತಾದ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಭೂಮಿಯ ಮೇಲೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಕಲ್ಪಿಸಲು ಪರಿಸರ ಸಂರಕ್ಷಣೆ ಮಾಡಬೇಕಾಗಿದ್ದು, ಮುಂದಿನ ಜನಾಂಗದಲ್ಲಿ ಸಮಾಜಮುಖಿ ಮನೋಭಾವ ಮೂಡಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.