ಕರ್ನಾಟಕವಷ್ಟೇ ಅಲ್ಲ, ದೇಶದಾದ್ಯಂತ ಜಾತಿ ಗಣತಿ ಆಗಲಿ

KannadaprabhaNewsNetwork |  
Published : Jan 29, 2024, 01:32 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಕರ್ನಾಟಕವಷ್ಟೇ ಅಲ್ಲದೇ ಇಡೀ ದೇಶದಾದ್ಯಂತ ಜಾತಿ ಗಣತಿ ಆಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಚಿತ್ರದುರ್ಗ: ಕರ್ನಾಟಕವಷ್ಟೇ ಅಲ್ಲದೇ ಇಡೀ ದೇಶದಾದ್ಯಂತ ಜಾತಿ ಗಣತಿ ಆಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಚಿತ್ರದುರ್ಗ ಹೊರವಲಯ ಮಾದಾರ ಗುರುಪೀಠದ ಪಕ್ಕ ಭಾನುವಾರ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದವತಿಯಿಂದ ಆಯೋಜಿಸಲಾಗಿದ್ದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಹಾಗೂ ಸರ್ವರ ಬದುಕು ರೂಪಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.

ಚಿತ್ರದುರ್ಗದಲ್ಲಿ ನಡೆದಿರುವುದು ಬದಲಾವಣೆಯ ಸಮಾವೇಶ. ಕಾಂಗ್ರೆಸ್‌ ಈ ದೇಶದ ಶಕ್ತಿ. ನಾವು ಅಧಿಕಾರಕ್ಕೆ ಬಂದರೆ ಜನರೇ ಅಧಿಕಾರದಲ್ಲಿ ಇದ್ದಂತೆ. ದೇವರು ವರ, ಶಾಪ ಕೊಡುವುದಿಲ್ಲ. ಅವಕಾಶ ಮಾತ್ರ ನೀಡುತ್ತಾನೆ. ಬದುಕನ್ನು ನಾವೇ ಜಾಗೃತರಾಗಿ ರೂಪಿಸಿಕೊಳ್ಳಬೇಕು. ಯಶಸ್ಸು ಯಾರ ಸ್ವತ್ತಲ್ಲ. ಬಡವರಿಂದ ಎಲ್ಲರೂ ರಾಜನಾಗಬಹುದು, ಶ್ರೀಮಂತನೂ ಆಗಬಹುದು. ಮಹಾಭಾರತ, ರಾಮಾಯಣ, ಖುರಾನ್‌ ಧರ್ಮ ಗ್ರಂಥ. ಆದರೆ, ಸರ್ವರ ರಕ್ಷಣೆಗಾಗಿ ಇರುವ ಬಹುದೊಡ್ಡ ಗ್ರಂಥ ಸಂವಿಧಾನ. ಹೋರಾಟ ಮಾಡಿಕೊಂಡು ಬಂದಾಗ ಮಾತ್ರ ಪ್ರಗತಿ ಸಾಧ್ಯ ಎಂದರು.

ಐದು ಕೈ ಮುಷ್ಠಿ ಸೇರಿ ಗಟ್ಟಿಯಾಯಿತು. ಐದು ಗ್ಯಾರಂಟಿ ಸೇರಿ ಶಕ್ತಿಯಾಯಿತು. ಇದರಿಂದ ಕಾಂಗ್ರೆಸ್‌ ಬಲಗೊಂಡಿತು. ಕಮಲದ ದಳ ಉದುರಿ ಹೋಯಿತು. ಬಡವರ ಪರವಾಗಿ ಕಾಂಗ್ರೆಸ್ ದೇಶದಲ್ಲಿ ಹಲವಾರು ಕಾರ್ಯಕ್ರಮ ಹಾಕಿಕೊಂಡು ಜಾರಿಗೆ ತಂದಿದೆ. ಕಾಂಗ್ರೆಸ್ ಶಕ್ತಿ ಏನೆಂಬುದ ಜನ ತಿಳಿದುಕೊಂಡಿದ್ದಾರೆ ಎಂದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, ಅಧಿಕಾರ ಬರಲು, ಕೆಳಗಿಳಿಸಲು ನಿಮ್ಮ ಶಕ್ತಿ ಏನೆಂಬುದನ್ನು ತೋರಿಸಿದ್ದೀರಿ. ನೀವೆಲ್ಲರೂ ಸಂಘಟಿತರಾದ ಪರಿಣಾಮ ಸರ್ಕಾರವೇ ನಿಮ್ಮ ಮುಂದೆ ಬಂದು ನಿಂತಿದೆ. ಶೋಷಿತ, ಹಿಂದುಳಿದ ಸಮುದಾಯದವರಿಗೆ ಉನ್ನತ ಸ್ಥಾನಮಾನ ನೀಡುವ ಕೆಲಸ ಯಾವ ಪಕ್ಷ ಮಾಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದರು.

ಸಚಿವ ಶಿವರಾಜ್‌ ತಂಗಡಗಿ ಮಾತನಾಡಿ, ಕಾಂತರಾಜ ವರದಿ ವಿರೋಧಿಸುವವರಿಗೆ ನಿಮ್ಮ ಸಂಘಟನಾ ಶಕ್ತಿಕರೆಂಟ್‌ ಶಾಕ್‌ ಕೊಟ್ಟಿದೆ. ಶೋಷಿತ, ದಲಿತ, ಹಿಂದುಳಿದ, ಜನಸಾಮಾನ್ಯರ ಪರ ಸಿಎಂ ಇದ್ದಾರೆ. ಕೇಂದ್ರ ಸರ್ಕಾರ ಮಾತನಾಡುತ್ತಿದೆಯೇ ಹೊರತು ನಿಮ್ಮ ಪರವಿಲ್ಲ. ಆದರೆ, ನೀವು ಅವರ ಪರವಾಗಿ ಕೆಲಸ ಮಾಡಿದ್ದೀರಿ. ಇಡಬ್ಲ್ಯುಎಸ್‌ ಮೇಲ್ವರ್ಗದ ಪರವಿದೆಯೇ ಹೊರತು ಶೋಷಿತರಿಗಾಗಿ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕೈ ಬಲಪಡಿಸುವ ಮೂಲಕ ದೊಡ್ಡ ಸಂದೇಶ ನೀಡಬೇಕಿದೆ.

ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ರಾಜ್ಯದಲ್ಲಿ ಜನಪರ, ಸಾಮಾಜಿಕ ನ್ಯಾಯದ ಪರವಾದ ಸರ್ಕಾರವಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿರುವ ಸರ್ಕಾರವಾಗಿದೆ. ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ನೀಡುವ ಕೆಲಸ ಹಿಂದೆಯೂ ಸಿದ್ದರಾಮಯ್ಯ ನೀಡಿದ್ದರು. ಅಲ್ಪಸಂಖ್ಯಾತರ ಅನುದಾನ ಹೆಚ್ಚಳಗೊಳಿಸಿದರು ಎಂದರು.

ಸಚಿವ ನಾಗೇಂದ್ರ ಮಾತನಾಡಿ, ಕೇಂದ್ರ ಮತ್ತು ರಾಜ್ಯದ ನಾಯಕರಾಗಲಿ, ಮುಖ್ಯಮಂತ್ರಿ ವಿರುದ್ಧ ಮಾತನಾಡಿದರೆ, ಮನೆಗೆ ಕಳುಹಿಸಲು ಶೋಷಿತರು ಸಿದ್ಧರಿದ್ದಾರೆ ಎಂಬುದಕ್ಕೆ ಈ ಸಮಾವೇಶ ನಿದರ್ಶನವಾಗಿದೆ. ನಿಮ್ಮೆಲ್ಲರಿಗೂ ಶಿಕ್ಷಣ, ಆರೋಗ್ಯ, ಆರ್ಥಿಕ ಬಲ ತುಂಬುವಲ್ಲಿ ಸರ್ಕಾರ ಬದ್ಧವಿದೆ. ಅದೇ ರೀತಿ ಕಾಂತರಾಜ್‌ ಆಯೋಗದ ವರದಿ ಜಾರಿಗೊಳಿಸುವ ವಿಶ್ವಾಸವಿದೆ.

ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, ಕಳೆದುಕೊಂಡ ಹಕ್ಕು ಮತ್ತು ಅಧಿಕಾರ ಪಡೆಯಲು ನಡೆಸುತ್ತಿರುವ ಸಮಾವೇಶ ಇದಾಗಿದೆ. ಮುಂದಿನ ಹೋರಾಟದ ರೂಪುರೇಷೆಗಳಿಗೂ ಸನ್ನದ್ಧವಾಗಿದೆ. ಸಾವಿರಾರು ವರ್ಷಗಳಿಂದ ವಂಚಿತವಾಗಿರುವ ಸಮಾಜಗಳು ಜಾಗೃತರಾಗಿ ಬರುವಂತ ದಿನಗಳಲ್ಲಿ ಒಗ್ಗಟ್ಟಾಗಿ ಸೌಲಭ್ಯ ಪಡೆಯಬೇಕಿದೆ. ಹಿಂದೆ ದೇವರಾಜ ಅರಸು, ಬಂಗಾರಪ್ಪ, ಈಗ ಸಿದ್ದರಾಮಯ್ಯ ನಮ್ಮ ನಾಯಕರು. ಸಮುದಾಯಗಳನ್ನು ಮೇಲೆತ್ತುವ ಕೆಲಸವನ್ನು ಗ್ಯಾರಂಟಿಗಳ ಮೂಲಕ ಮಾಡಿದ್ದಾರೆ. ಅವರ ಶಕ್ತಿ ಬಲಪಡಿಸಿದಷ್ಟು ಹಿಂದುಳಿದ ಸಮುದಾಯಗಳಿಗೆ ಅನುಕೂಲವಾಗಲಿದೆ ಎಂದರು.

ಸಚಿವ ಎಚ್‌.ಸಿ.ಮಹದೇವಪ್ಪ ಮಾತನಾಡಿ, ವೈಜ್ಞಾನಿಕವಾಗಿ ಜಾತಿ ಗಣತಿ ಆಗದ ಹೊರತು ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಹೀಗಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಆಶಯದಂತೆ 1951ರಲ್ಲಿ ಜಾತಿಗಣತಿ ಆಯಿತು. 1991ರಲ್ಲಿ ಮಂಡಲ್‌ ಕಮಿಷನ್‌ ಜಾರಿಯಾಯಿತು. 1996ರಲ್ಲಿ ವಾಜಪೇಯಿ ಸರ್ಕಾರ ಜಾತಿಗಣತಿ ಮಾಡಲು ಅವಕಾಶ ನೀಡಲಿಲ್ಲ. ರಾಜಕೀಯದ ಕೀಲಿ ಕೈ ಮೂಲಕ ಶೋಷಿತರಿಗೆ ಆಗುತ್ತಿರುವ ವಂಚನೆ ತಪ್ಪಿಸಲು ಸಾಧ್ಯವಿದೆ. ಸಂವಿಧಾನ ರಕ್ಷಣೆಯಿಂದ ಮಾತ್ರ ನಮಗೆ ರಕ್ಷಣೆ ಮಾತ್ರವಲ್ಲದೆ, ಬದಲಾವಣೆಯ ಭವಿಷ್ಯ ಕಾಣಬಹುದು ಎಂದರು.

ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮಾತನಾಡಿ, ಸಮುದಾಯದ ಬೇಡಿಕೆಗಳಿಗೆ ನನ್ನ ಬೆಂಬಲವೂ ಇದೆ. ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್‌ ಘೋಷಿಸಿದಂತೆ ಐದು ಗ್ಯಾರಂಟಿ ಜಾರಿಗೊಳಿಸಿದೆ. ಸ್ಲಂ ನಿವಾಸಿಗಳಿಗೆ ರಾಜೀವ್‌ಗಾಂಧಿ ಹೌಸಿಂಗ್‌ ಬೋರ್ಡ್‌ ಕಾರ್ಪೋರೇಷನ್‌ನಿಂದ 2016ರಲ್ಲಿ ಕಾಂಗ್ರೆಸ್‌ ನೀಡಿದ್ದನ್ನು ಹೊರತುಪಡಿಸಿದ್ದು ಬಿಟ್ಟರೆ, ಈವರೆಗೂ ಒಂದು ಮನೆ ನೀಡಿಲ್ಲ. 2.38 ಲಕ್ಷ ಜನ ಬೀದಿಯಲ್ಲಿ ಇದ್ದಾರೆ. 1.38 ಲಕ್ಷ ಮನೆಗಳನ್ನು ನೀಡುವ ಉದ್ದೇಶವಿದ್ದು, ಫೆ. 24ರೊಳಗೆ 36 ಸಾವಿರ ಮನೆಗಳನ್ನು ವಿತರಿಸಲಾಗುವುದು. ಪಕ್ಷಕ್ಕೆ 25 ಸ್ಥಾನಗಳನ್ನು ಲೋಕಸಭೆಯಲ್ಲಿ ಗೆಲ್ಲಿಸಲು ಜನ ಆಶೀರ್ವದಿಸಬೇಕು ಎಂದರು.

ದಲಿತ ಮುಖಂಡ ಮಾವಳ್ಳಿ ಶಂಕರ್‌ ಮಾತನಾಡಿ, ಪೂರ್ವಿಕರ ಮಾತಿಗೆ ಬೆಲೆ ಕೊಡದ ಕಾರಣ ಇಂದು ಶೋಷಣೆಗೆ ಒಳಗಾಗಿದ್ದೇವೆ. ಚರಿತ್ರಾಕಾರರು ಮರೆಮಾಚಿದ್ದಾರೆ. ಸಾಹು ಮಹರಾಜರು ದೇಶದಲ್ಲಿ ಮೊಟ್ಟಮೊದಲು ಶಿಕ್ಷಣ, ಉದ್ಯೋಗದಲ್ಲಿ ಸಾಮಾಜಿಕ ನ್ಯಾಯ ನೀಡಿದರು. ದನ, ಕುರಿ ಕಾಯುವವರಿಗೆ ಶಿಕ್ಷಣ ನೀಡಿದರೆ ಏನು ಪ್ರಯೋಜನವೆಂದು ಹೇಳಿಕೆ ನೀಡಿದ ಸ್ವಾತಂತ್ರ್ಯ ಹೋರಾಟರಾರರೊಬ್ಬರು ಇತಿಹಾಸದ ಪುಟ ಸೇರಿದರು. ಸಂಘ ಪರಿವಾರ ಸಿದ್ದರಾಮಯ್ಯ ಅವರನ್ನು ಹಿಂದು ವಿರೋಧಿ ಎಂಬುದಾಗಿ ಬಿಂಬಿಸುತ್ತಿದೆ. ಅನಂತ್‌ಕುಮಾರ್‌ ಹೆಗ್ಡೆ ಮನಬಂದಂತೆ ಮಾತನಾಡುತ್ತಿದ್ದು, ಅವರ ಬಾಯಿಗೆ ಬೀಗ ಹಾಕುವ ಕೆಲಸ ಶೋಷಿತ ಸಮುದಾಯದವರು ಮಾಡಬೇಕಿದೆ ಎಂದರು.

ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಶೋಷಿತರಲ್ಲಿ ಕೆಲವರಷ್ಟೇ ಶಿಕ್ಷಣ, ಉದ್ಯೋಗ ಪಡೆಯುವಲ್ಲಿ ಮುಂದಾಗಿದ್ದಾರೆ. ನಮ್ಮ ಸೌಲಭ್ಯ ಪಡೆಯಲು ಬಲಾಢ್ಯರು ಪ್ರಯತ್ನಿಸುತ್ತಿದ್ದಾರೆ. ಸರ್ವರಿಗೂ ಸಮಾನ ಅವಕಾಶ ನೀಡಬೇಕು ಎಂಬುದು ಶೋಷಿತ ಸಮುದಾಯದ ಬೇಡಿಕೆಯಾಗಿದೆ. ಪುರೋಹಿತ ಶಾಹಿ ಪದ್ಧತಿ ನಮ್ಮವರನ್ನು ಮರಳು ಮಾಡುತ್ತಿವೆ. ಶೋಷಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಡಬ್ಲ್ಯುಎಸ್‌ ಜಾರಿ ಮಾಡಿ ಶ್ರಮ ಜೀವಿಗಳ ಊಟಕ್ಕೆ ಕೈ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ