ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಪೊಲೀಸ್ ಸಮುದಾಯ ಭವನದಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಪ್ರಯುಕ್ತ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನಸಿಕ ನೆಮ್ಮದಿ ಹಾಗೂ ಸಂತೋಷದಿಂದ ಮಾಡುವ ಹಬ್ಬ- ಹರಿದಿನಗಳು ಯಾರಿಗೂ ತೊಂದರೆಯಾಗದಂತೆ ನಡೆಯಬೇಕು. ಈ ಬಾರಿ ರಾಜ್ಯ ಸರ್ಕಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಹಲವು ನಿಯಮಗಳನ್ನು ರೂಪಿಸಿದೆ. ಇವುಗಳನ್ನು ತಿಳಿದುಕೊಂಡು ಎಲ್ಲಿಯೂ ಲೋಪವಾಗದಂತೆ ಸಂಘಟಕರು, ಧಾರ್ಮಿಕ ಮುಖಂಡರು ಎಚ್ಚರವಹಿಸಿ ಪಾಲಿಸಬೇಕು ಎಂದು ತಿಳಿಸಿದರು.
ಪಿಒಪಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೆರವಣಿಗೆ ವೇಳೆ ಯಾರೂ ಸಹ ಡಿಜೆ ಬಳಸುವಂತಿಲ್ಲ. ಅತಿ ಶಬ್ದ ಮಾಡುವುದರಿಂದ ಹಿರಿಯ ನಾಗರಿಕರು, ಮಕ್ಕಳು,ಗರ್ಭಿಣಿಯರು ಬಾಣಂತಿಯರಿಗೆ ಅಪಾಯವಾಗುವ ಸಂಭವ ಹೆಚ್ಚಿದೆ. ಪಟಾಕಿ ಸಿಡಿಸಬಾರದು. ಸಿಡಿಸಲೇಬೇಕು ಎಂದಿದ್ದರೆ ಹಸಿರು ಪಟಾಕಿಯನ್ನು ಮಿತವಾಗಿ ಬಳಸಿ, ಸಂಘ- ಸಂಸ್ಥೆಗಳ ಮುಖಂಡರು ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಗುರುತಿನ ಚೀಟಿ ಹಾಗೂ ಸಮವಸ್ತ್ರಗಳನ್ನು ಹಾಕಿಕೊಳ್ಳುವ ಮೂಲಕ ಅಶಾಂತಿ ಸೃಷ್ಟಿಸುವ ಸಮಾಜಘಾತುಕ ಶಕ್ತಿಗಳನ್ನು ತಡೆಯಲು ಇಲಾಖೆಯೊಂದಿಗೆ ಸಹಕರಿಸಬೇಕು. ಸರ್ಕಾರ ನೀಡಿರುವ ಯಾವುದೇ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಗಣೇಶನ ಮೂರ್ತಿ ವಿಸರ್ಜನೆ ಶ್ರದ್ದಾಭಕ್ತಿಯಿಂದ ಮಾಡಬೇಕು. ಆದರೆ ಕೆಲವರು ಮದ್ಯವನ್ನು ಸೇವಿಸಿ ಉತ್ಸವದಲ್ಲಿ ಭಾಗವಹಿಸುವುದು, ಹಬ್ಬದ ಪ್ರಯುಕ್ತ ಇಸ್ಪೀಟ್ ಸೇರಿ ಹಲವು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಾರೆ. ಇದು ಧಾರ್ಮಿಕ ಆಚರಣೆಗೆ ತೋರುವ ಅಗೌರವ. ಹೀಗಾಗಿ ಯಾರೂ ಇಂತಹ ಕೆಲಸ ಮಾಡಬಾರದು ಎಂದು ತಿಳಿ ಹೇಳಿದರು.
ಯಾವುದೇ ಪ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವಾಗ ನಗರಸಭೆ ಅನುಮತಿ ಪಡೆದೇ ಹಾಕಬೇಕು. ಹೀಗೆ ಹಾಕುವಾಗ ಕೋಮುಭಾವನೆ ಕೆರಳಿಸುವಂತೆ, ಸಮಾಜಘಾತುಕ ಶಕ್ತಿಗಳನ್ನು ವೈಭವೀಕರಿಸುವಂತೆ ಇರಬಾರದು. ಕಾನೂನು ಪ್ರಕಾರವೇ ಎಲ್ಲವೂ ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಮಾಡಬಾರದು. ಜಿಲ್ಲೆಯಲ್ಲಿ ಎಲ್ಲ ಕಾನೂನುಗಳನ್ನು ಪಾಲಿಸಿ ಶಾಂತಿಯುತವಾಗಿ ಗಣೇಶ ಉತ್ಸವ ನಡೆಸುವ ಆಯೋಜಕರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಡಿವೈಎಸ್ಪಿ ಶಿವಕುಮಾರ್, ಬೆಸ್ಕಾಂ ಎಇಇ ರಮೇಶ್, ಜಿಲ್ಲಾ ಅಗ್ನಿಶಾಮಕ ದಳದ ಬಸವರಾಜ್, ತಹಸೀಲ್ದಾರ್ ಅನಿಲ್, ಚಿಂತಾಮಣಿ ಡಿವೈಎಸ್ಪಿ ಮುರಳೀಧರ್, ಮಾತನಾಡಿದರು.
---------