ಧಾರವಾಡ:
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಲು ತಂತ್ರಜ್ಞಾನದ ಜತೆಗೆ ಸಂವಹನ ಕೌಶಲ್ಯಗಳು ಅತ್ಯಗತ್ಯ ಎಂದು ಆಕಾಶವಾಣಿ ನಿವೃತ್ತ ನಿದೇರ್ಶಕ ಸಿ.ಯು. ಬೆಳ್ಳಕ್ಕಿ ಹೇಳಿದರು.ಇಲ್ಲಿಯ ಅಂಜುಮನ್ ಕಾಲೇಜಿನಲ್ಲಿ ನಡೆದ ಹಿರಿಯ ನಾಗರಿಕರ ಜತೆ ಸಂವಾದದಲ್ಲಿ ಮಾತನಾಡಿದ ಅವರು, ಸಂವಹನ ಕೌಶಲ್ಯಗಳು ಪ್ರತಿ ವೃತ್ತಿಪರರಿಗೆ ಪ್ರಮುಖವಾಗಿರಬೇಕು. ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆ ಗಳಿಸಿದ ಅಂಕಗಳಿಂದ ಅಳೆಯುವುದಿಲ್ಲ. ಬದಲಿಗೆ ಕೌಶಲ್ಯಗಳು ಮುಖ್ಯ. ಪದವಿ ಪ್ರಮಾಣ ಪತ್ರಕ್ಕೆ ಮಾತ್ರವೇ ಸೀಮಿತ. ಹೀಗಾಗಿ ಕೌಶಲ್ಯ ಮೈಗೂಡಿಸಿಕೊಂಡು, ದೇಶ ಕಟ್ಟುವ ಕೈಂಕರ್ಯ ಮಾಡಬೇಕು ಎಂದರು.
ಪ್ರಸ್ತುತ ಸರ್ಕಾರಿ ಅಲ್ಲದೇ ಖಾಸಗಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಜಾಗತೀಕರಣ ಹಾಗೂ ಖಾಸಗೀಕರಣ ಪ್ರಯುಕ್ತ ಉದ್ಯೋಗ ಕ್ಷೇತ್ರದಲ್ಲಿ ಹೇರಳ ಅವಕಾಶ ಸೃಷ್ಟಿಯಾಗಲಿವೆ. ಅದಕ್ಕೆ ತಕ್ಕಂತೆ ಕೌಶಲ್ಯ ಹೊಂದಬೇಕು ಎಂದು ಸಲಹೆ ನೀಡಿದರು.ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಸಿ.ಆರ್. ಪಾಟೀಲ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ತಾಂತ್ರಿಕ ಜ್ಞಾನದ ಜತೆ ವಿವಿಧ ವೃತ್ತಿಪರ ಹಾಗೂ ಸಂವಹನ ಕೌಶಲ್ಯ ಬೆಳೆಸಿಕೊಳ್ಳುವಂತೆ ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಮಾಜಿನ್ ಮುಲ್ಲಾ ಮಾತನಾಡಿ, ದೇಶದಲ್ಲಿ ಅವಿಭಕ್ತ ಕುಟುಂಬದಲ್ಲಿ ಭಾವನಾತ್ಮಕ ಸಂಬಂಧ ಗಟ್ಟಿಯಾಗಿದ್ದವು. ಆಧುನಿಕ ಯುಗದಲ್ಲಿ ಭಾವನಾತ್ಮಕ ಸಂಬಂಧ ನಶಿಸುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಇತ್ತೀಚೆಗೆ ಅಗಲಿದ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಉರ್ದು ಕವಿ ಖಾಲಿದ್ ಅಹ್ಮದ್ ಅವರಿಗೆ ಎರಡು ನಿಮಿಷ ಮೌನಚಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಾಚಾರ್ಯ ಎನ್.ಎಂ. ಮಕಾನದಾರ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಎಸ್.ಎಸ್. ಅದೋನಿ, ಸಮೀನಾ ನದಾಫ್, ಡಾ. ಆಸ್ಮಾ ಬಳ್ಳಾರಿ ಮತ್ತು ಡಾ. ಐ.ಎ. ಮುಲ್ಲಾ ಇದ್ದರು.