ಆಟಿಸಂ ಲಕ್ಷಣಗಳಿರುವ ಮಕ್ಕಳ ಬಗ್ಗೆ ಪ್ರೀತಿ ಇರಲಿ: ಡಾ.ಭುವನೇಶ್ವರಿ ಯಳಮಲಿ

KannadaprabhaNewsNetwork |  
Published : Apr 18, 2026, 02:45 AM IST
(ಫೋಟೊಬಿಕೆಟಿ1, 'ವಿಶ್ವಆಟಿಸಂ ಜಾಗೃತಿ ದಿನ' ಮತ್ತು 'ಶಿಕ್ಷಕರಿಗಾಗಿ ಅರಿವು ಹಾಗೂ ತರಬೇತಿ' ಕಾರ್ಯಕ್ರಮ) | Kannada Prabha

ಸಾರಾಂಶ

ಆಟಿಸಂ (ಸ್ವಲೀನತೆ) ಒಂದು ಕಾಯಿಲೆಯಲ್ಲ, ಮೆದುಳಿನ ಬೆಳವಣಿಗೆಯಲ್ಲಿನ ವ್ಯತ್ಯಾಸವಷ್ಟೇ ಆಗಿದೆ. ಇಂತವರ ಸಾಮರ್ಥ್ಯ ಗುರುತಿಸುವುದು ಮುಖ್ಯ. ಸ್ವಲೀನತೆ ಲಕ್ಷಣಗಳಿರುವ ಮಕ್ಕಳ ಬಗ್ಗೆ ಪ್ರೀತಿ, ತಾಳ್ಮೆ ಮತ್ತು ಸಹಾನುಭೂತಿ ಇರಲಿ ಎಂದು ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಟಿಸಂ (ಸ್ವಲೀನತೆ) ಒಂದು ಕಾಯಿಲೆಯಲ್ಲ, ಮೆದುಳಿನ ಬೆಳವಣಿಗೆಯಲ್ಲಿನ ವ್ಯತ್ಯಾಸವಷ್ಟೇ ಆಗಿದೆ. ಇಂತವರ ಸಾಮರ್ಥ್ಯ ಗುರುತಿಸುವುದು ಮುಖ್ಯ. ಸ್ವಲೀನತೆ ಲಕ್ಷಣಗಳಿರುವ ಮಕ್ಕಳ ಬಗ್ಗೆ ಪ್ರೀತಿ, ತಾಳ್ಮೆ ಮತ್ತು ಸಹಾನುಭೂತಿ ಇರಲಿ ಎಂದು ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಹೇಳಿದರು.

ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಮಾನಸಿಕ ಚಿಕಿತ್ಸಾ ವಿಭಾಗ ಮತ್ತು ಬಿವಿವಿಎಸ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಆಟಿಸಂ ಜಾಗೃತಿ ದಿನ ಮತ್ತು ಶಿಕ್ಷಕರಿಗಾಗಿ ಅರಿವು ಹಾಗೂ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಲ್ಯದಲ್ಲೇ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸ್ವಲೀನತೆ ಗುರುತಿಸಿ ಸೂಕ್ತ ಚಿಕಿತ್ಸೆಯಿಂದ ಜೀವನಶೈಲಿ ಮತ್ತು ಕಲಿಯುವಿಕೆ ಉತ್ತಮಪಡಿಸಬಹುದು. ಮಾನಸಿಕ ಮತ್ತು ಸ್ಪೀಚ್ ಥೆರಪಿ ಚಿಕಿತ್ಸೆಗಳು ಲಭ್ಯವಿದ್ದು, ಶಾಲೆಯಲ್ಲಿ ಶಿಕ್ಷಕರು ಆಟಿಸಂ ಗುಣಲಕ್ಷಣಗಳಿರುವ 3 ರಿಂದ 5 ವರ್ಷದ ಒಳಗಿನ ಮಕ್ಕಳನ್ನು ಗುರುತಿಸಿ ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಿದರೆ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಆಟಿಸಂನಿಂದ ಬಳಲುತ್ತಿರುವ ಮಕ್ಕಳಿಗೆ ಅಗತ್ಯದ ಚಿಕಿತ್ಸೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವುದು ವೈದ್ಯರ ಆದ್ಯತೆಯಾಗಲಿ. ಪಾಲಕರು ಕೂಡ ಜವಾಬ್ದಾರಿ ನಿರ್ವಹಿಸಬೇಕು. ಆಟಿಸಂ ಕುರಿತು ಸಾರ್ವಜನಿಕರಲ್ಲಿ ವಿಶೇಷವಾಗಿ ಶಿಕ್ಷಕರಲ್ಲಿ ಜಾಗೃತಿ ಮತ್ತು ತಿಳಿವಳಿಕೆ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬಾಗಲಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಗುಂಡಪ್ಪ ಬಡದಾನಿ, ಆಟಿಸಂ ಗುಣಲಕ್ಷಣಗಳಿರುವ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದು ಅಗತ್ಯವಾಗಿದೆ. ಆಟಿಸಂನಿಂದ ಬಳಲುತ್ತಿರುವ ಮಕ್ಕಳಿಗೆ ಬಿವಿವಿ ಸಂಘದ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾಲೇಜಿನ ಚಿಕಿತ್ಸಾ ತಜ್ಞರು ಈಗಾಗಲೇ 27 ಸರ್ಕಾರಿ ಶಾಲೆಗಳಲ್ಲಿನ ಆಟಿಸಂ ಗುಣಲಕ್ಷಣಗಳಿರುವ ಮಕ್ಕಳನ್ನು ಗುರುತಿಸಿದ್ದು, ಆರಂಭದ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದರು.

ಬಾಗಲಕೋಟೆ ನಗರದ ವಿವಿಧ ಶಾಲೆಗಳಿಂದ ನೂರಕ್ಕೂ ಹೆಚ್ಚು ಶಿಕ್ಷಕ/ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಲ್ಲಿ ಕಂಡುಬರುವ ಆಟಿಸಂ ಗುರುತಿಸುವ ಕುರಿತು ತರಬೇತಿ ಪಡೆದರು. ಚಿಕ್ಕಮಕ್ಕಳ ತಜ್ಞವೈದ್ಯೆ ಡಾ.ಶೀಲಾ, ಮನೋವೈದ್ಯೆ ಡಾ.ಲಕ್ಷ್ಮಿದೇವಿ, ಮಾನಸಿಕ ತಜ್ಞೆ ಸಮೀಕ್ಷಾ, ಸ್ಪೀಚ್ ಥೆರಪಿಸ್ಟ್ ಸ್ನೇಹಾ ಹಿರೇಮಠ ಮತ್ತು ಶಿಕ್ಷಣ ಇಲಾಖೆಯ ಸಿ.ವೈ.ಸಂಗಮ ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು. ಡಾ.ಗೌರಿ ಪ್ರಾರ್ಥಿಸಿದರು. ಡಾ.ಭಾಸ್ಕರ ಮಾರಾ ಸ್ವಾಗತಿಸಿದರು ಮತ್ತು ಸಿಂಚನಾ ವಂದಿಸಿದರು.

ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜ್ ಉಪಪ್ರಾಚಾರ್ಯ ಡಾ.ಸಿ.ಎಸ್. ಹಿರೇಮಠ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜ್ ಪ್ರಾಚಾರ್ಯ ಡಾ.ಶ್ರೀವಿದ್ಯಾ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ, ಮಾನಸಿಕ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ನಾರಾಯಣ ಮುತಾಲಿಕ, ವಿವಿಧ ಶಾಲೆಗಳ ಶಿಕ್ಷಕರು, ಮೆಡಿಕಲ್ ಕಾಲೇಜ್ ವೈದ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಬಸವನ ಬಾಗೇವಾಡಿಯಿಂದ ಬಸವಜ್ಯೋತಿ ಪಾದಯಾತ್ರೆ
ಉಕ್ಕು ಸಚಿವಾಲಯದ ಹಿಂದಿ ಸಲಹಾ ಸಮಿತಿಗೆ ಡಾ.ಸುನಿತಾ ಚವ್ಹಾಣ ನೇಮಕ