ಶಿರಹಟ್ಟಿ: ಇಂದಿನ ಆಧುನಿಕ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕನುಗುಣವಾಗಿ ಶಿಕ್ಷಕರು ತಮ್ಮ ಜ್ಞಾನ ಕೌಶಲ್ಯ ಹಾಗೂ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕಾಗುತ್ತದೆ. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಉತ್ತಮ ಜ್ಞಾನ ಹೊಂದಿದ್ದು, ಎಲ್ಲ ಹಂತದ ಪರೀಕ್ಷೆ ಎದುರಿಸಿ ಪ್ರತಿಭೆ ಹೊಂದಿರುತ್ತೀರಿ. ಅದು ಸರಿಯಾಗಿ ಬಳಕೆಯಾಗಬೇಕು ಎಂದು ಜಿಲ್ಲಾ ಉಪ ನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ಅತಿ ಬದ್ಧತೆಯಿಂದ ಕೆಲಸ ಮಾಡುವ ವಿಜ್ಞಾನಿಯೊಬ್ಬ ತನ್ನ ಸಾಮರ್ಥ್ಯದ ಕೇವಲ ಶೇ. ೨೧ರಷ್ಟು ಮಾತ್ರ ಬಳಸುತ್ತಾನೆ ಎಂದು ಸಮೀಕ್ಷೆ ಹೇಳುತ್ತದೆ. ಹಾಗಾಗಿ ಶಿಕ್ಷಕರು ತಮ್ಮಲ್ಲಿರುವ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿ ಮಗುವಿನ ಭಾವನೆ ಗೌರವಿಸುವುದನ್ನು ಶಿಕ್ಷಕರು ರೂಢಿಸಿಕೊಳ್ಳಬೇಕು.ಶಿಕ್ಷಣದ ಮೂಲ ಉದ್ದೇಶ ಮಕ್ಕಳನ್ನು ನಿರ್ದಿಷ್ಟ ಜ್ಞಾನ ಕೌಶಲ್ಯ ಮತ್ತು ಮೌಲ್ಯಗಳೊಂದಿಗೆ ಸಜ್ಜುಗೊಳಿಸುವುದಾಗಿದೆ. ಶಿಕ್ಷಕರು ಪಾಠದ ಉದ್ದೇಶ ಅರಿತು ಪೂರ್ವ ತಯಾರಿಯೊಂದಿಗೆ ಲಭ್ಯವಿರುವ ಕಲಿಕಾ ಬೋಧನೋಪಕರಣ ಬಳಸಿಕೊಂಡು ಚಟುವಟಿಕೆಯಾಧಾರಿತವಾಗಿ ಅರ್ಥಪೂರ್ಣ ಬೋಧನಾ ಕಲಿಕಾ ಪ್ರಕ್ರಿಯೆ ನಡೆಯಬೇಕು ಎಂದು ಸಲಹೆ ನೀಡಿದರು.ಕ್ಷೇತ್ರ ಶಿಕ್ಷನಾಧಿಕಾರಿ ಎಚ್.ಎನ್. ನಾಣಕಿ ನಾಯಕ ಮಾತನಾಡಿ, ಶಿಕ್ಷಕರು ಮಕ್ಕಳ ಬಗ್ಗೆ ಸಕಾರಾತ್ಮಕತೆ ಬೆಳೆಸಿಕೊಳ್ಳಬೇಕು. ಮಕ್ಕಳನ್ನು ಅವರು ಇರುವಂತೆಯೇ ಸ್ವೀಕರಿಸುವುದನ್ನು ಕಲಿಯಬೇಕು. ಜತೆಗೆ ಮಕ್ಕಳಿಗೆ ಮಾದರಿಯಾಗುವಂತೆ ಶಿಕ್ಷಕರ ನಡೆಯಿರಬೇಕು ಎಂದು ಕಿವಿಮಾತು ಹೇಳಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ಸಾಹಿತಿ ಡಾ.ನಿಂಗು ಸೊಲಗಿ ಉಪನ್ಯಾಸ ನೀಡಿ, ಕಾಲಕಾಲಕ್ಕೆ ಬದಲಾದ ಸಾಂಸ್ಕೃತಿಕ ಆಯಾಮಗಳು ಹಾಗೂ ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಅಗತ್ಯ ಅಂಶಗಳ ಕುರಿತು ಹೇಳಿದರು.
ಆಧುನಿಕ ಶೈಕ್ಷಣಿಕ ಸವಾಲು ಎದುರಿಸಲು ಹಾಗೂ ಮುಂದೆ ಬರುವ ಕೃತಕ ಬುದ್ಧಿಮತ್ತೆ ಆಧಾರಿತ ಶಿಕ್ಷಣ ನೀಡಲು ಪ್ರತಿಯೊಬ್ಬ ಶಿಕ್ಷಕರು ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜತೆಗೆ ಎನ್.ಸಿ.ಎಫ್. ೨೦೦೫ ಕಲಿಯುವುದನ್ನು ಕಲಿಸಬೇಕು ಎಂಬ ಅಂಶ ಹಾಗೂ ಕಲಿತದ್ದನ್ನ ಮಕ್ಕಳು ತಮ್ಮ ನಿಜ ಜೀವನದೊಂದಿಗೆ ಸಂಬಂಧಿಕರಿಸಿಕೊಳ್ಳಲು ಸಮರ್ಥರಾಗಬೇಕು ಎಂಬ ಅಂಶಗಳನ್ನು ಹೇಳಿದರು.