ಕನ್ನಡಪ್ರಭ ವಾರ್ತೆ ನಾಗಮಂಗಲ
ಕಳೆದ ಸೆ.11 ರಂದು ಗಣಪತಿ ಮೆರವಣಿಗೆ ವೇಳೆ ಉಂಟಾದ ಕೋಮು ಗಲಭೆ ಪ್ರಕರಣ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಇಂತಹ ಪ್ರಕರಣ ಮುಂದೆಂದೂ ಮರುಕಳಿಸದಂತೆ ಎರಡೂ ಕೋಮಿನ ನಡುವೆ ಸಾಮರಸ್ಯ ಹಾಗೂ ಐಕ್ಯತೆ ಇರಲಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಪಟ್ಟಣದ ತಾಲೂಕು ಆಡಳಿತಸೌಧದ ಒಳಾಂಗಣದಲ್ಲಿ ಬೆಂಕಿಯಿಂದ ಹಾನಿಯಾದ ಅಂಗಡಿಗಳ ಮಾಲೀಕರು ಮತ್ತು ವ್ಯಾಪಾರಸ್ಥರಿಗೆ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಮಂಜೂರಾತಿ ಪತ್ರ ವಿತರಣೆ ಜೊತೆಗೆ ವೈಯಕ್ತಿಕ ಪರಿಹಾರ ನೀಡಿ ಮಾತನಾಡಿದರು.
ಈ ಘಟನೆಯಿಂದ ಕೆಲವರು ಖುಷಿ ಪಟ್ಟರೆ, ಮತ್ತೆ ಕೆಲವರು ಘಟನೆಗೆ ಪ್ರೋತ್ಸಾಹ ನೀಡಿರಬಹುದು. ಹಾಗೆಯೇ ಕೆಲವರು ಘಟನೆಯನ್ನು ತಡೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರಬಹುದು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗದಿರುವುದು ನಿಜಕ್ಕೂ ಸಮಾಧಾನ ಪಡುವ ವಿಷಯ ಎಂದರು.ಅಂದು ಸಂಭವಿಸಿದ ಈ ಘಟನೆಯಿಂದ ಓರ್ವ ಪೊಲೀಸ್ ಪೇದೆ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ತಲೆದಂಡ ಆಗಿದೆ. ಅಂದು ನಾನು ಈ ಕ್ಷೇತ್ರದ ಜನ ಪ್ರತಿನಿಧಿಯಾಗಿ ಭರವಸೆ ನೀಡಿದ್ದಂತೆ ರಾಜ್ಯ ಸರ್ಕಾರದ ಇತಿಹಾಸದಲ್ಲಿಯೇ ಹೆಚ್ಚು ಪರಿಹಾರದ ಹಣವನ್ನು ಕೊಡಿಸಿದ್ದೇನೆ. ಇಂತಹ ಪ್ರಕರಣಗಳಿಗೆ ಅತೀ ಹೆಚ್ಚೆಂದರೆ 10 ಲಕ್ಷ ರು. ಪರಿಹಾರ ನೀಡಿರಬಹುದು. ಆದರೆ, ಇದಕ್ಕಿಂತ ಏಳು ಪಟ್ಟು ಹೆಚ್ಚಿಗೆ ಕೊಡಿಸಿದ್ದೇನೆ ಎಂದು ತಿಳಿಸಿದರು.
ಇದೊಂದು ವಿಶೇಷ ಪ್ರಕರಣವೆಂದು ಭಾವಿಸಿದ ಮುಖ್ಯಮಂತ್ರಿಗಳು ನನ್ನ ಮನವಿಗೆ ಸ್ಪಂದಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಪರಿಹಾರ ನೀಡುವಾಗ ಅನೇಕ ಕಾನೂನು ತೊಡಕುಗಳು ಎದುರಾಗುತ್ತವೆ. ಆದರೆ, ಕಾನೂನು ಒಂದೆಡೆಯಾದರೆ, ಮಾನವೀಯತೆ ಮುಖ್ಯವಾಗಿರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮನವಿಗೆ ಸ್ಪಂದಿಸಿ ಮಾನವೀಯತೆಗೆ ಮೊದಲ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.76.45 ಲಕ್ಷ ರು. ಪರಿಹಾರ ವಿತರಣೆ:
ಘಟನೆಯಲ್ಲಿ ಬೆಂಕಿಗಾಹುತಿಯಾಗಿದ್ದ 22 ಕಟ್ಟಡಗಳ ಮಾಲೀಕರಿಗೆ 48.45 ಲಕ್ಷ ರು. ಹಾಗೂ 22 ಮಂದಿ ವ್ಯಾಪಾರಸ್ಥರಿಗೆ 28 ಲಕ್ಷ ಸೇರಿದಂತೆ ಒಟ್ಟು 44 ಫಲಾನುಭವಿಗಳಿಗೆ ತಾಂತ್ರಿಕ ವಿಭಾಗದ ಅಧಿಕಾರಿಗಳು ಸಿದ್ದಪಡಿಸಿದ್ದ ವರದಿಯಂತೆ ಒಟ್ಟು 76.45 ಲಕ್ಷ ರು. ಪರಿಹಾರ ಮಂಜೂರಾತಿ ಪತ್ರವನ್ನು ವಿತರಿಸಿದರು. ಇನ್ನೆರಡು ದಿನಗಳಲ್ಲಿ ಅವರವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ ಎಂದರು.ವೈಯಕ್ತಿಕ ಪರಿಹಾರ ನೀಡಿದ ಸಚಿವರು:
ಸರ್ಕಾರದಿಂದ ನೀಡಿರುವ ಪರಿಹಾರ ಮಂಜೂರಾತಿ ಪತ್ರದ ಜೊತೆಗೆ ಜೊತೆಗೆ ವೈಯುಕ್ತಿಕವಾಗಿ ಎಲ್ಲಾ 44 ಮಂದಿಗೆ ತಲಾ 10 ಸಾವಿರ ರು. ನಗದು ಪರಿಹಾರ ಹಣ ವಿತರಿಸಿದರು.ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಕ್ ತನ್ವೀರ್ ಆಸೀಫ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಜಿ.ಆದರ್ಶ, ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಪುರಸಭಾ ಅಧ್ಯಕ್ಷ ಅಲೀ ಅನ್ಸರ್ ಪಾಷ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಮುಖ್ಯಾಧಿಕಾರಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಸಂಪತ್‌ಕುಮಾರ್, ಸ್ಟಾರ್ ಗ್ರೂಪ್ ಮಾಲೀಕ ಅಮೀರುಲ್ ಮುರ್ತುಜಾ ಸೇರಿದಂತೆ ಹಲವರು ಇದ್ದರು.