ಕೊಪ್ಪಳ:
ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆಗೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಕೃಷಿ ಅಧಿಕಾರಿಗಳಿಗೆ ಜಿಪಂ ಸಿಇಒ ವರ್ಣಿತ್ ನೇಗಿ ಸೂಚಿಸಿದರು.ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಹಿಂಗಾರು ಹಂಗಾಮಿನ ಪೂರ್ವಸಿದ್ಧತೆ ದ್ವೈಮಾಸಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮುಂಗಾರು ಹಂಗಾಮು ಪೂರ್ಣಗೊಂಡಿದ್ದು, ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಂಡು ಸಕಾಲಕ್ಕೆ ರೈತರಿಗೆ ಪೂರೈಸಬೇಕು. ಬಿತ್ತನೆ ಬಳಿಕ ಬೇಕಾಗುವ ಯೂರಿಯಾ, ಕೀಟನಾಶಕವನ್ನು ಬೇಡಿಕೆಗೆ ತಕ್ಕಂತೆ ವಿತರಿಸಬೇಕೆಂದು ಸೂಚಿಸಿದರು.ಆಂದೋಲನ ನಡೆಸಿ:
ಪ್ರತಿ ಹೋಬಳಿ ಮಟ್ಟದಲ್ಲಿ ಬೀಜೋಪಚಾರ ಆಂದೋಲನ ನಡೆಸಬೇಕು. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಗುಣಮಟ್ಟ ಪರೀಕ್ಷಿಸಲು ಪ್ರತಿ ತಿಂಗಳ ಮೊದಲ ವಾರ ಗುಣ ನಿಯಂತ್ರಣ ಸಪ್ತಾಹ ಕೈಗೊಳ್ಳಬೇಕು. ಆತ್ಮ, ಕೃಷಿ ಸಂಜೀವಿನಿ ಹಾಗೂ ಕೃಷಿ ಸಖಿ ಮತ್ತು ಪಶು ಸಖಿ ಸಹಾಯದಿಂದ ಗುಣಮಟ್ಟದ ಬಿತ್ತನೆ ಬೀಜ ಬಿತ್ತಲು ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಹಿಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 1,80,725 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು ಬಿತ್ತನೆ ಬೀಜದ ಬೇಡಿಕೆ 93,602.63 ಕ್ವಿಂಟಲ್ ಇದೆ. ಈಗಾಗಲೇ 37,764 ಕ್ವಿಂಟಲ್ ಇದ್ದು, ಕಳೆದ ವರ್ಷ 28 ಸಾವಿರ ಕ್ವಿಂಟಲ್ ವಿತರಿಸಲಾಗಿತ್ತು. ಈ ವರ್ಷ ಕಡಲೆ (18,325 ಕ್ವಿಂಟಲ್), ಜೋಳ (208 ಕ್ವಿಂಟಲ್), ಮೆಕ್ಕೆಜೋಳ (68 ಕ್ವಿಂಟಲ್), ಶೇಂಗಾ (8616 ಕ್ವಿಂಟಲ್), ಸೂರ್ಯಕಾಂತಿ (4 ಕ್ವಿಂಟಲ್), ಕುಸುಬೆ (6 ಕ್ವಿಂಟಲ್) ಹಾಗೂ ಗೋದಿ (13.78 ಕ್ವಿಂಲ್), ವಿತರಿಸುವ ಗುರಿ ನಿಗದಿಪಡಿಸಲಾಗಿದೆ ಎಂದರು.
ರೈತರ ಬೇಡಿಕೆಯಂತೆ ಬಿತ್ತನೆ ಬೀಜವು ಜಿಲ್ಲೆಯ 20 ರೈತ ಸಂಪರ್ಕ ಕೇಂದ್ರ ಹಾಗೂ 8 ಹೆಚ್ಚುವರಿ ಕೇಂದ್ರಗಳ ಮುಖಾಂತರ ಅ. 1ರಿಂದ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವರ್ಷ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎಂದರು.ಬಿಳಿ ಜೋಳ 3 ಕೆಜಿ ಬೀಜಕ್ಕೆ ₹ 180 ದರವಿದ್ದು ಸಾಮಾನ್ಯ ವರ್ಗದ ರೈತರಿಗೆ ₹ 60 ಮತ್ತು ಎಸ್ಸಿ-ಎಸ್ಟಿ ರೈತರಿಗೆ ₹ 90 ಹಾಗೂ 50 ಕೆಜಿ ಶೇಂಗಾ ಬೀಜಕ್ಕೆ ₹ 6750 ಇದ್ದು ಸಾಮಾನ್ಯ ವರ್ಗದ ರೈತರಿಗೆ ₹ 700 ಮತ್ತು ಎಸ್ಸಿ-ಎಸ್ಟಿ ರೈತರಿಗೆ ₹ 1050 ಸಹಾಯಧನವಿದೆ. ಬಿತ್ತನೆಗೆ ಅಗತ್ಯವಿರುವ 4492 ಟನ್ ಡಿಎಪಿ ಹಾಗೂ 15,183 ಟನ್ ಕಾಂಪ್ಲೆಕ್ಸ್ ಗೊಬ್ಬರ ದಾಸ್ತಾನಿದ್ದು ಯೂರಿಯಾವನ್ನು ರೈತರ ಬೇಡಿಕೆಗೆ ತಕ್ಕಂತೆ ಪೂರೈಸಲಾಗುವುದು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಸ್ತರಣಾ ಮುಂದಾಳು ಡಾ. ಎಂ.ವಿ. ರವಿ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಘವೇಂದ್ರ ಯಲಿಗಾರ, ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ವಿಸ್ತರಣಾ ಮುಂದಾಳು ಡಾ. ಮೌಲಾಸಾಬ್, ಉಪ ಕೃಷಿ ನಿರ್ದೇಶಕ ಎಲ್. ಸಿದ್ದೇಶ್ವರ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.