ಔರಾದ(ಬಿ), ಕಮಲನಗರ ತಾಲೂಕುಗಳಲ್ಲಿ ನೀರಿನ ಕೊರತೆಯಾಗದಿರಲಿ

KannadaprabhaNewsNetwork |  
Published : Mar 05, 2024, 01:35 AM IST
ಚಿತ್ರ 4ಬಿಡಿಆರ್53 | Kannada Prabha

ಸಾರಾಂಶ

ಔರಾದ(ಬಿ) ಹಾಗೂ ಕಮಲನಗರ ತಾಲೂಕು ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ತೀವ್ರ ಸಮಸ್ಯೆಯಿರುವ ಗ್ರಾಮಗಳಿಗೆ ತುರ್ತಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು.

ಔರಾದ್‌: ಔರಾದ(ಬಿ) ಹಾಗೂ ಕಮಲನಗರ ತಾಲೂಕು ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ತೀವ್ರ ಸಮಸ್ಯೆಯಿರುವ ಗ್ರಾಮಗಳಿಗೆ ತುರ್ತಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕೆಂದು ಶಾಸಕ ಪ್ರಭು.ಬಿ ಚವ್ಹಾಣ ಅಧಿಕಾರಿಗಳಿಗೆ ಸೂಚಿಸಿದರು.

ಔರಾದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಔರಾದ(ಬಿ) ಹಾಗೂ ಕಮಲನಗರ ತಾಲೂಕುಗಳ ಗ್ರಾಮ ಪಂಚಾಯಿತಿವಾರು ಎಲ್ಲಾ ಗ್ರಾಮಗಳಲ್ಲಿರುವ ಕುಡಿಯುವ ನೀರು ಪೂರೈಕೆಯ ಕುರಿತು ಪಿಡಿಓಗಳಿಂದ ವಿವರಣೆ ಪಡೆದ ಶಾಸಕರು, ಸದ್ಯಕ್ಕೆ ಎಲ್ಲೆಲ್ಲಿ ನೀರಿನ ತೀವ್ರ ಸಮಸ್ಯೆಯಿದೆ ಅಂತಹ ಗ್ರಾಮಗಳಲ್ಲಿ ತ್ವರಿತವಾಗಿ ನೀರು ಪೂರೈಸಲು ಮುಂದಾಗಬೇಕು.

ಬೇಸಿಗೆ ತೀವ್ರತೆ ಹೆಚ್ಚಾಗುತ್ತಿದ್ದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಅಂತಹ ಗ್ರಾಮಗಳನ್ನು ಮುಂಚಿತವಾಗಿ ಗುರುತಿಸಿಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದರು.

ಸ್ಥಳೀಯವಾಗಿಯೇ ನೀರಿನ ವ್ಯವಸ್ಥೆ ಮಾಡಿದಲ್ಲಿ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಬೇಸಿಗೆ ಮುಗಿಯುವವರೆಗೆ ಎಲ್ಲ ಪಿಡಿಓಗಳು ತುರ್ತು ಸಂದರ್ಭಗಳನ್ನು ಹೊರತುಪಡಿಸಿ ರಜೆ ಪಡೆಯಬಾರದು. ಈ ಅವಧಿಯಲ್ಲಿ ಇನ್ನಷ್ಟು ಚುರುಕಿನಿಂದ ಕೆಲಸ ಮಾಡಬೇಕು. ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮೊಬೈಲ್ ಫೋನ್‌ಗಳನ್ನು ಚಾಲ್ತಿಯಲ್ಲಿಟ್ಟುಕೊಳ್ಳಬೇಕು. ಜನರ ಕರೆಗಳಿಗೆ ಉತ್ತರಿಸಬೇಕು. ಕ್ಷೇತ್ರದ ಯಾವೊಂದು ಗ್ರಾಮದಲ್ಲಿಯೂ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ವಡಗಾಂವ, ಜೀರ್ಗಾ, ಚಟ್ನಾಳ್, ಬೇಲೂರ(ಎನ್), ಮಹಾರಾಜವಾಡಿ, ಎಕಲಾರ ತಾಂಡಾ, ಮುತಖೇಡ್, ಹೊಕ್ರಾಣಾ ಸೇರಿದಂತೆ ನೀರಿನ ಸಮಸ್ಯೆಯಿರುವ ಎಲ್ಲ ಗ್ರಾಮಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಸಮನ್ವಯತೆಯೊಂದಿಗೆ ಸಮಸ್ಯೆ ಇತ್ಯರ್ಥ ಪಡಿಸಬೇಕೆಂದರು.

ಬಾದಲಗಾಂವ್ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಜಲ ಜೀವನ್ ಮಿಷನ್‌ ಕಾಮಗಾರಿ ವಿಳಂಬವಾಗಿ ನಡೆಯುತ್ತಿರುವ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಿದಾಗ ಅಧಿಕಾರಿಗಳ ಮೇಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸುಭಾಷ ಅವರ ವಿರುದ್ಧ ಕೋಪಗೊಂಡ ಶಾಸಕರು, ಕ್ಷೇತ್ರದಲ್ಲಿ ಸುಮಾರು 200 ಕೋಟಿ ರು.ಗೂ ಹೆಚ್ಚು ಮೊತ್ತದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕಮಲನಗರ ಸ್ವಚ್ಛಗೊಳಿಸಿ:

ಕಮಲನಗರ ದಿನೇ ದಿನೇ ಬೃಹತ್ತಾಗಿ ಬೆಳೆಯುತ್ತಿದೆ. ಆದರೆ ಎಲ್ಲಾ ಕಡೆ ಅಶುಚಿತ್ವ ಎದ್ದು ಕಾಣುತ್ತಿದೆ. ಯುವಕರು ಪ್ರತಿದಿನ ದೂರವಾಣಿ ಮುಖಾಂತರ ಕರೆ ಮಾಡಿ ದೂರುಗಳನ್ನು ಹೇಳುತ್ತಿದ್ದಾರೆ. ಆದರೂ ತಾವೇನು ಮಾಡುತ್ತಿದ್ದೀರಿ ಎಂದು ಕಮಲನಗರ ಇಓ ಮಾಣಿಕರಾವ ಪಾಟೀಲ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮುಖ್ಯಾಧಿಕಾರಿಯ ಬಗ್ಗೆ ಬೇಸರ:

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯ ವಿರುದ್ಧ ಸಭೆಯಲ್ಲಿಯೇ ತೀವ್ರ ಬೇಸರ ವ್ಯಕ್ತಪಡಿಸಿದ ಶಾಸಕರು, ಔರಾದ(ಬಿ) ಪಟ್ಟಣದಲ್ಲಿ ನೀರು ಸರಬರಾಜು ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ಕಲುಷಿತ ನೀರು ಸರಬರಾಜು ಆಗುತ್ತಿರುವ ಕಾರಣ ಅನಾರೋಗ್ಯ ಸಮಸ್ಯೆಗಳಾಗುವ ಸಾಧ್ಯತೆಗಳಿರುತ್ತವೆ. ಇದನ್ನು ಸರಿಪಡಿಸಿಕೊಂಡು ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಔರಾದ(ಬಿ) ಪಟ್ಟಣದಲ್ಲಿ ಅಮರೇಶ್ವರ ಜಾತ್ರಾ ಮಹೋತ್ಸವ ಜರುಗಲಿದ್ದು, ಇಡೀ ಪಟ್ಟಣವನ್ನು ಸ್ವಚ್ಛಗೊಳಿಸಬೇಕು. ಎಲ್ಲ ವಾರ್ಡ್ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಬೇಕೆಂದು ಸೂಚಿಸಿದರು.

ಸಭೆಯಲ್ಲಿ ಔರಾದ(ಬಿ) ಎಪಿಎಂಸಿ ಅಧ್ಯಕ್ಷರಾದ ಧೊಂಡಿಬಾ ನರೋಟೆ, ಔರಾದ(ಬಿ) ತಹಸೀಲ್ದಾರ ನಾಗಯ್ಯ ಹಿರೇಮಠ, ಕಮಲನಗರ ತಹಸೀಲ್ದಾರ ಅಮಿತಕುಮಾರ ಕುಲಕರ್ಣಿ, ಔರಾದ ತಾ.ಪಂ ಅಧಿಕಾರಿ ಬೀರೇಂದ್ರಸಿಂಗ್ ಠಾಕೂರ್, ಕಮಲನಗರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಣೀಕರಾವ ಪಾಟೀಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸುಭಾಷ.ಡಿ, ಜೆಸ್ಕಾಂನ ರವಿ ಕಾರಬಾರಿ ಸೇರಿದಂತೆ ವಿವಿಧ ಇಲಾಖೆಗಳ ತಾ.ಪಂ ಹಾಗೂ ಎಲ್ಲ ಗ್ರಾಮ ಪಿಡಿಓಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ