ಹಾನಗಲ್ಲ: ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಪ್ರತಿಯೊಬ್ಬರೂ ಪರಿಸರ ಕಾಳಜಿ ಹಾಗೂ ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಜೀವನ ಶೈಲಿ ನಡೆಸುವ ತೀರ ಅಗತ್ಯವಿದೆ ಎಂದು ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ಸಹ ನಿರ್ದೇಶಕರಾದ ಜೇಸನ್ ಪಾಯ್ಸ್ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶಿರಗೋಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರಾದ ಶಂಕರಗೌಡ ಪಾಟೀಲ ಮಾತನಾಡಿ, "ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಪಡೆಯಲು ಸಾಧ್ಯ. ಪರಿಸರ ಮಾಲಿನ್ಯ ಮತ್ತು ಪ್ಲಾಸ್ಟಿಕ್ ಬಳಕೆ ಇಂದಿನ ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಹಾಗೂ ಗಿಡಮರಗಳನ್ನು ಬೆಳೆಸಿ ಪರಿಸರವನ್ನು ರಕ್ಷಿಸಬೇಕು. ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ " ಎಂದು ಕರೆ ನೀಡಿದರು.
ಉತ್ತಮ ಆರೋಗ್ಯವಂತ ವ್ಯಕ್ತಿ ಅತ್ಯಂತ ಶ್ರೀಮಂತನಾಗಿರುತ್ತಾನೆ. ದೇಹದ ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅತ್ಯಂತ ಅಗತ್ಯ. ಇಂದಿನ ಅವಸರದ ಜೀವನದಲ್ಲಿ ನೈಸರ್ಗಿಕ ಹಾಗೂ ವಿಟಮಿನ್ ಆಧಾರಿತ ಆಹಾರ ಧಾನ್ಯಗಳು, ಹಸಿರು ತರಕಾರಿ ಮತ್ತು ಹಣ್ಣುಗಳ ಸೇವನೆ ಕಡಿಮೆಯಾಗುತ್ತಿದೆ. ವಿಶೇಷವಾಗಿ ಗರ್ಭಿಣಿಯರು ಹಾಗೂ ಬಾಣಂತಿಯರು ತಮ್ಮ ಆಹಾರ ಕ್ರಮದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಗರ್ಭಾವಸ್ಥೆ ಮತ್ತು ಹೆರಿಗೆಯ ನಂತರದ ಅವಧಿಯಲ್ಲಿ ರಕ್ತಹೀನತೆ ಹಾಗೂ ಪೌಷ್ಟಿಕಾಂಶದ ಕೊರತೆ ಎದುರಾಗದಂತೆ ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ಅಗತ್ಯ ವಿಟಮಿನ್‌ಗಳಿರುವ ಆಹಾರವನ್ನು ತಪ್ಪದೇ ಸೇವಿಸಬೇಕು. ಜೊತೆಗೆ ಸ್ಥಳೀಯವಾಗಿ ಲಭ್ಯವಿರುವ ಸಿರಿಧಾನ್ಯಗಳು ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ದಿನನಿತ್ಯದ ಊಟದಲ್ಲಿ ಅಳವಡಿಸಿಕೊಳ್ಳುವುದು ತಾಯಿ ಮತ್ತು ಮಗುವಿನ ಸಮಗ್ರ ಆರೋಗ್ಯಕ್ಕೆ ಸಹಕಾರಿಯಾಗಿದೆ. ಸರಕಾರವು ಆರೋಗ್ಯಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಿದೆ, ಎಲ್ಲಾ ಇಲಾಖೆಗಳು ನಿಮ್ಮೊಂದಿಗೆ ಕೆಲಸ ಮಾಡುತ್ತಿವೆ. ಅದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದರು.. ವೇದಿಕೆಯಲ್ಲಿ ಜನ ವೇದಿಕೆ ನಾಯಕರಾದ ಹೊನ್ನಮ್ಮ ಮೇಳಾಗಟ್ಟಿ ಹಾಗೂ ಮಂಜಣ್ಣ ವಾಲ್ಮೀಕಿ ಉಪಸ್ಥಿತರಿದ್ದರು. ಗರಡೇರ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ವಾಯ್.ಎಸ್. ಹೊನ್ನಮ್ಮ ಸ್ವಾಗತಿಸಿದರು. ರಮೇಶ ಬಾರ್ಕಿ ಕಾರ್ಯಕ್ರಮವನ್ನು ನಿರೂಪಿಸಿದರು.