ನಾವಿಂದು 21ನೇ ಶತಮಾನದಲ್ಲಿದ್ದೇವೆ ಎನ್ನುವುದನ್ನು ಅರ್ಥಮಾಡಿಕೊಂಡು ಮೂಢನಂಬಿಕೆಗಳನ್ನು ನಂಬದೇ ವೈಜ್ಞಾನಿಕ ಮನೋಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮುಂಡರಗಿ
ನಾವಿಂದು 21ನೇ ಶತಮಾನದಲ್ಲಿದ್ದೇವೆ ಎನ್ನುವುದನ್ನು ಅರ್ಥಮಾಡಿಕೊಂಡು ಮೂಢನಂಬಿಕೆಗಳನ್ನು ನಂಬದೇ ವೈಜ್ಞಾನಿಕ ಮನೋಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿಜ್ಞಾನವನ್ನು ಹಳ್ಳಿಯ ಮನೆ-ಮನೆಗಳಿಗೆ ಮುಟ್ಟಿಸುವ ಕೆಲಸ ನಡೆಯಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಸಿ.ಎಸ್. ಅರಸನಾಳ ಹೇಳಿದರು.ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಎಂ.ಎಸ್. ಡಂಬಳ ಹೆಣ್ಣುಮಕ್ಕಳ ಪ್ರೌಢಶಾಲೆ ಮುಂಡರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಎಂ.ಎಸ್. ಡಂಬಳ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ಅವಲೋಕನ, ಪ್ರಾಯೋಗತ್ವ ಮತ್ತು ಸತ್ಯ ಅನ್ವೇಷಣೆಯನ್ನು ಬೆಳೆಸಿಕೊಂಡಾಗ ಮಾತ್ರ ವೈಜ್ಞಾನಿಕ ಮನೋಭಾವನೆ ಬರುತ್ತದೆ ಎಂದವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳಸಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಇಂತಹ ವಿಜ್ಞಾನ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ವಿಚಾರಗೋಷ್ಠಿ ಕಾರ್ಯಕ್ರಮವನ್ನು ಎಂ.ಎಸ್.ಡಂಬಳ ಹೆಣ್ಣುಮಕ್ಕಳ ಪ್ರೌಢಶಾಲೆಯ ಮೇಲ್ವಿಚಾರಣಾ ಸಮಿತಿಯ ಕಾರ್ಯಾಧ್ಯಕ್ಷ ಎಂ.ಎಸ್.ಶಿವಶೆಟ್ಟಿ ಉದ್ಘಾಟಿಸಿದರು.ಮುಂಡರಗಿ ತಾಲೂಕು ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ತೆಗ್ಗಿನಮನಿ ಮಾತನಾದರು. ಚೈತ್ರಾ ವಾಲ್ಮೀಕಿ ಅವರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಎಂ.ವಿ.ಕೋರಿ, ಶ್ರೀ ಜ.ಅ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿ.ಸಿ. ಹಂಪಿಮಠ, ಎಸ್.ಎ. ಮರಿಗೌಡ್ರ, ಎನ್.ಸಿ. ಹಿರೇಮಠ ಮುಂತಾದವರಿದ್ದರು. ಪ್ರೌಢಶಾಲಾ ವಿಭಾಗದ ಬಿಆರ್ ಪಿ ರಾಘವೇಂದ್ರ ಗುಡಗೂರ ನಿರೂಪಿಸಿ, ಶಿವಕುಮಾರ್ ಗಿಂಡಿಮಠ ಸ್ವಾಗತಿಸಿ, ಶಿಕ್ಷಣ ಸಂಯೋಜಕ ಎಸ್.ಮನೋಹರ್ ವಂದಿಸಿದರು.