ಕುಷ್ಟಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರು, ಶುಶ್ರೂಷಕರು, ತಾಂತ್ರಿಕ ಹಾಗೂ ಸ್ವಚ್ಛತಾ ಸಿಬ್ಬಂದಿ ನಿಯೋಜಿಸಬೇಕಿದೆ. ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಿ, ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ: ಇಲ್ಲಿನ ನೂರು ಹಾಸಿಗೆಗಳ ಆಸ್ಪತ್ರೆ. ನಿತ್ಯ 300ಕ್ಕೂ ಅಧಿಕ ರೋಗಿಗಳ ಭೇಟಿ. ಆದರೆ, ರೋಗಿಗಳ ಸಂಬಂಧಿಕರಿಗೆ ಊಟದ ಹಾಲ್ ಇಲ್ಲ, ಬಟ್ಟೆ ತೊಳೆಯಲು ವಾಷಿಂಗ್ ಮಷಿನ್ ಇಲ್ಲ, ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಆಸ್ಪತ್ರೆಯಲ್ಲಿ ತೊಳೆದ ಬಟ್ಟೆಗಳನ್ನು ಮುಂಭಾಗದಲ್ಲೇ ಒಣಹಾಕುವ ಸ್ಥಿತಿ. ಬಸ್‌ ನಿಲ್ದಾಣದಿಂದ ಆಸ್ಪತ್ರೆಗೆ ತೆರಳಲು ಬಸ್‌ ಸೌಲಭ್ಯವಿಲ್ಲದೆ ದುಬಾರಿ ಆಟೋ ದರದ ಹೊರೆ. ಹೀಗೆ ಹಲವು ಸಮಸ್ಯೆಗಳ ನಡುವೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.

ಇದು ಕುಷ್ಟಗಿ ಪಟ್ಟಣದ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಥಿತಿ.

ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಾದ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಸಿಬ್ಬಂದಿ ಅಭಾವದ ದೂರುಗಳು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿವೆ.

ಆಸ್ಪತ್ರೆಯಲ್ಲಿ ಬಳಸುವ ಬೆಡ್‌ಶೀಟ್, ಹೊದಿಕೆ ಹಾಗೂ ಇತರ ಬಟ್ಟೆಗಳನ್ನು ತೊಳೆಯಲು ವಾಷಿಂಗ್ ಮಷಿನ್ ಮತ್ತು ಬಟ್ಟೆ ತೊಳೆಯುವ ವ್ಯವಸ್ಥೆ ಇಲ್ಲ. ಬಟ್ಟೆಗಳನ್ನು ತೊಳೆದು ಆಸ್ಪತ್ರೆಯ ಮುಂಭಾಗದಲ್ಲೇ ಒಣಹಾಕಲಾಗುತ್ತಿದೆ. ಬಟ್ಟೆ ತೊಳೆಯಲು ಹಾಗೂ ಒಣಗಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

ಒಳರೋಗಿಗಳೊಂದಿಗೆ ಉಳಿಯುವ ಸಂಬಂಧಿಕರಿಗೆ ಊಟ ಮಾಡಲು ಪ್ರತ್ಯೇಕ ಹಾಲ್ ಇಲ್ಲ. ಕಾರಿಡಾರ್‌ನಲ್ಲೇ ಊಟ ಮಾಡಬೇಕಿದೆ. ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಸಾಕಷ್ಟು ಆಸನಗಳು, ಕಾಯುವ ಕೊಠಡಿ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ.

ಪಾರ್ಕಿಂಗ್ ಸಮಸ್ಯೆ: ಆಸ್ಪತ್ರೆ ಆವರಣದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ರೋಗಿಗಳನ್ನು ಕರೆತರುವ ವಾಹನಗಳ ನಿಲುಗಡೆಗೆ ತೊಂದರೆಯಾಗುತ್ತಿದೆ. ವಾಹನ ಸುಗಮ ಪ್ರವೇಶ ಮತ್ತು ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕಿದೆ.

ಬಸ್‌ ಸೌಲಭ್ಯ ಕಲ್ಪಿಸಿ: ದೂರದ ಊರುಗಳಿಂದ ಬಸ್‌ನಲ್ಲಿ ಬರುವ ರೋಗಿಗಳು ನಿಲ್ದಾಣದಿಂದ ಆಸ್ಪತ್ರೆಗೆ ತೆರಳಲು ಆಟೋ ಅವಲಂಬಿಸಬೇಕಾಗಿದೆ. ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಬಸ್‌ ನಿಲ್ದಾಣದಿಂದ ಆಸ್ಪತ್ರೆಗೆ ನಿಗದಿತ ಸಮಯದಲ್ಲಿ ಬಸ್‌ ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.

ಸಿಬ್ಬಂದಿ ಕೊರತೆಯ ಆತಂಕ: ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರು, ಶುಶ್ರೂಷಕರು, ತಾಂತ್ರಿಕ ಹಾಗೂ ಸ್ವಚ್ಛತಾ ಸಿಬ್ಬಂದಿ ನಿಯೋಜಿಸಬೇಕಿದೆ. ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಿ, ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ಆಸ್ಪತ್ರೆ ಆಡಳಿತ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ, ಕೊರತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ರೋಗಿಗಳು.

ಹೆರಿಗೆ ವೇಳೆ ಹಣ ಪಡೆಯುವ ಆರೋಪ-ತನಿಖೆಗೆ ಆಗ್ರಹ: ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಈ ಆರೋಪಗಳ ಸತ್ಯಾಸತ್ಯತೆಯನ್ನು ಸಂಬಂಧಿಸಿದ ಮೇಲಧಿಕಾರಿಗಳು ಪರಿಶೀಲಿಸಬೇಕಿದೆ. ಸಮರ್ಪಕ ಮಾಹಿತಿ ಪಡೆದು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸೇವೆ ಪಡೆಯುವ ಬಡ ಹಾಗೂ ಸಾಮಾನ್ಯ ಕುಟುಂಬಗಳಿಗೆ ಅನಗತ್ಯ ಆರ್ಥಿಕ ಹೊರೆ ಉಂಟಾಗದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಪ್ಪಿತಸ್ಥರ ವಿರುದ್ಧ ತನಿಖೆ ನಡೆಯಲಿ:‌ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕಾದ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆಯಾಗದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕು. ಹೆರಿಗೆ ಸಮಯದಲ್ಲಿ ಹಣ ಪಡೆಯುತ್ತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಮೇಲಧಿಕಾರಿಗಳು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತಪರ ಹೋರಾಟಗಾರ ಮಲ್ಲಿಕಾರ್ಜುನ ಅಡವಿಭಾವಿ ಹೇಳಿದರು.

ಇರುವ ಸೌಲಭ್ಯದಲ್ಲೇ ಕೆಲಸ:‌ ಕುಷ್ಟಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಈ ಕುರಿತು ಶಾಸಕರ ಗಮನಕ್ಕೆ ತರಲಾಗಿದೆ. ಸಿಬ್ಬಂದಿ ನೇಮಕಾತಿ ಪ್ರಕ್ರೆಯ ಹಂತದಲ್ಲಿದ್ದು, ಇರುವ ಸೌಲಭ್ಯ ಹಾಗೂ ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಚಂದ್ರಕಲಾ ಹೇಳಿದರು.