ಹೊಸಪೇಟೆ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸಿ ವಿಜಯನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಕಲ್ಯಾಣ-ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ‍್ಯಗೊಂಡು 77 ವರ್ಷಗಳಾದ ನೆನಪಿನಲ್ಲಿ ಇಂದು ಏರ್ಪಡಿಸಿರುವ ಕಲ್ಯಾಣ ಕರ್ನಾಟಕ ಉತ್ಸವ ಸ್ಮರಣೀಯವಾಗಿದೆ. ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ವಿಜಯನಗರ, ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿ ಪ್ರದೇಶಗಳು ಸ್ವಾತಂತ್ರವಾಗಲು ಒಂದು ವರ್ಷ ಕಾಲ ಕಾಯಬೇಕಾಯಿತು ಎಂದರು.
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಹಿತದೃಷ್ಟಿಯಿಂದ ಸಂವಿಧಾನ ತಿದ್ದುಪಡಿ ಕಾಯ್ದೆ 371 (ಜೆ) ಜಾರಿಗೆ ತರಲಾಗಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಸಾಧ್ಯವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಗೆ ಒಳಪಡುವ ಏಳು ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಶೇ. 80ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇತರೆ ಜಿಲ್ಲೆಗಳಲ್ಲಿ ಈ ಭಾಗದ ಜನರಿಗಾಗಿ ಶೇ. 8ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯನ್ನು ಕಲಬುರಗಿಯಲ್ಲಿ ಸ್ಥಾಪಿಸಿದ್ದು, ಇದು ಈ ಭಾಗದ 40 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೂ ಸೇರಿದಂತೆ, ಎಲ್ಲ ಭಾಗಗಳ ಮೂಲಭೂತ ಸೌಕರ್ಯ, ಆರೋಗ್ಯ, ಸಾಮಾಜಿಕ, ರಸ್ತೆ ಸಂಪರ್ಕ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಅನುದಾನವನ್ನು ಮೀಸಲಿರಿಸಲಾಗಿದೆ. ಇದರನ್ವಯ 2024-25ನೇ ಸಾಲಿನ ಮ್ಯಾಕ್ರೋ ಯೋಜನೆಯಡಿ ಹೊಸಪೇಟೆ ಪಟ್ಟಣದ 250 ಹಾಸಿಗೆ ಆಸ್ಪತ್ರೆಯನ್ನು 400 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆರಿಸುವ ಬೃಹತ್ ಕಾಮಗಾರಿಗೆ ಮಂಡಳಿಯಿಂದ ಮಂಜೂರಾತಿ ದೊರಕಿದೆ ಎಂದರು.ಹಿಟ್ನಾಳನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಸವರಾಜ ಟಿ.ಎಚ್. ವಿಶೇಷ ಉಪನ್ಯಾಸ ನೀಡಿದರು.
ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಜಿಪಂ ಸಿಇಒ ಅಕ್ರಮ ಅಲಿ ಷಾ, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.ಆಕರ್ಷಕ ಪಥಸಂಚಲನ
ಪರೇಡ್ ಕಮಾಂಡರ್ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸ್, ಗೃಹರಕ್ಷದಳ, ಎನ್.ಸಿ.ಸಿ., ಗೈಡ್ಸ್, ಸೇವಾದಳ, ವಿವಿಧ ಶಾಲೆಗಳು ಒಳಗೊಂಡಂತೆ ಒಟ್ಟು ಎಂಟು ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಮಕ್ರಮಗಳು ನಡೆದವು. ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಸವರಾಜ ನಿರ್ವಹಿಸಿದರು.