ಚಿಂತನ ಬದುಕಿನೊಂದಿಗೆ ಮಾಡುವ ಅನುಸಂಧಾನದ ನಿರಂತರ ಪಯಣ. ಅದು ಜ್ಞಾನಕ್ಕೆ ಪ್ರೇರಣೆ ನೀಡುತ್ತದೆ. ಶರಣರು, ದಾಸರು, ಸಂತರು ಚಿಂತನೆಗೆ ಮಹತ್ವ ನೀಡಿದರು.
ಯಲ್ಲಾಪುರ: ಮನುಷ್ಯನನ್ನು ಮಾನವನನ್ನಾಗಿಸುವ ಸಾಧನ ವಿವೇಕ. ಚಿಂತನೆಯಿಂದ ಅನುಭವವನ್ನು, ಅನುಭವದ ಮೂಲಕ ವಿವೇಕವನ್ನು ಪಡೆಯಲು ಸಾಧ್ಯ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಾಹಿತ್ಯ ಚಿಂತಕ ಡಾ. ಸಿ. ಸೋಮಶೇಖರ ಹೇಳಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ನ ಚಿಂತನ ಸರಣಿ ಕಾರ್ಯಕ್ರಮದ ಲೋಗೊ ಅನಾವರಣಗೊಳಿಸಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಶ್ರೀಧರ ಬಳಗಾರ ಅವರ ಬಲಿಪಾದ ಕಾದಂಬರಿಯ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿಂತನ ಬದುಕಿನೊಂದಿಗೆ ಮಾಡುವ ಅನುಸಂಧಾನದ ನಿರಂತರ ಪಯಣ. ಅದು ಜ್ಞಾನಕ್ಕೆ ಪ್ರೇರಣೆ ನೀಡುತ್ತದೆ. ಶರಣರು, ದಾಸರು, ಸಂತರು ಚಿಂತನೆಗೆ ಮಹತ್ವ ನೀಡಿದರು. ಮಕ್ಕಳಲ್ಲಿ ಉತ್ತಮ ಚಿಂತನೆಗಳ ಮೂಲಕ ಆದರ್ಶಮಯ ಬದುಕು ರೂಪಿಸಿಕೊಳ್ಳುವ ವೇದಿಕೆ ಇದಾಗಲಿ ಎಂದರು.
ಬಲಿಪಾದ ಕಾದಂಬರಿಯ ಕುರಿತು ಅವಲೋಕನ ಮಾಡಿದ ವಿಮರ್ಶಕ, ವಿಶ್ರಾಂತ ಪ್ರಾಚಾರ್ಯ ಆರ್.ಡಿ. ಹೆಗಡೆ ಆಲ್ಮನೆ, ಸುಪಾ ಅಣೆಕಟ್ಟು ಆರಂಭವಾದ ನಂತರ ಆ ಭಾಗದ ಕುಣಬಿ ಜನಾಂಗದ ಮೇಲೆ ಬೀರಿದ ಸಾಂಸ್ಕೃತಿಕ ಪರಿಣಾಮದ ಬಗ್ಗೆ ಬಲಿಪಾದ ಕಾದಂಬರಿಯಲ್ಲಿ ಬಳಗಾರ ಸುಂದರವಾಗಿ ವಿಶ್ಲೇಷಿಸಿದ್ದಾರೆ ಎಂದರು.
ಕಾದಂಬರಿಯನ್ನು ವಿಶ್ಲೇಷಿಸಿದ ರಂಗಕರ್ಮಿ ಆರ್.ಎನ್. ಭಟ್ಟ ದುಂಡಿ, ಅಲಕ್ಷಿತ ಸಮುದಾಯದ ಸಾಂಸ್ಕೃತಿಕ ಬದುಕಿನ ವಿನಾಶದ ಬಗ್ಗೆ ಕೇಂದ್ರೀಕೃತವಾದ ಜಗತ್ತಿನ ನಾಲ್ಕನೇ ಕಾದಂಬರಿ ಇದು ಎಂಬುದು ವಿಶೇಷ. ವಾಗ್ವಾದ ಪರಂಪರೆಯ ಮೂಲಕ ಜಗತ್ತಿಗೆ ಮೌಲ್ಯ, ಬೆಳಕನ್ನು ನೀಡಿದ ದೇಶ ನಮ್ಮದು ಎಂದರು.
ಕಾದಂಬರಿಯ ಲೇಖಕ ಡಾ. ಶ್ರೀಧರ ಬಳಗಾರ ಮಾತನಾಡಿ, ಸುಪಾ ಮುಳುಗಡೆ ಕೇವಲ ಒಂದು ಪ್ರದೇಶದ ಮುಳುಗಡೆಯಲ್ಲ, ಒಂದು ಸಮುದಾಯದ ನಾಶದಂತೆ ಕಂಡಿತು. ಅವರ ಒಡನಾಟದಿಂದ ಶಿಷ್ಟ ಪರಂಪರೆಯ ಜ್ಞಾನ, ಪ್ರಜ್ಞೆ ಕೇವಲ ದುರಹಂಕಾರ ಎಂಬ ಅರಿವು ಮೂಡುತ್ತದೆ. ಅವರ ಬದುಕು, ಸಂಸ್ಕೃತಿ, ಪರಂಪರೆಗಳು ಒಂದು ಅಧ್ಯಯನದ ಕೇಂದ್ರವಾಗಿ ಕಾಣುತ್ತವೆ. ಗಾಂಧಿ ಕಲ್ಪಿತ ಜೀವನ ಬುಡಕಟ್ಟು ಸಮುದಾಯಗಳಲ್ಲಿ ಜೀವಂತವಾಗಿದೆ. ಕುಣಬಿ ಜನಾಂಗದವರ ನಡುವೆ ಇದ್ದು, ಅವರದೇ ಕಥೆ- ವ್ಯಥೆಯನ್ನು ಕಾದಂಬರಿಯಾಗಿಸಿದ ವಿಚಾರ ಹಂಚಿಕೊಂಡರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೀಡಿಯಾ ಸ್ಕೂಲ್ ಮೂಲಕ ಪ್ರತಿ ತಿಂಗಳು ಚಿಂತನ ಸರಣಿಯೊಂದನ್ನು ಆರಂಭಿಸುತ್ತಿದ್ದೇವೆ. ಎಡ ಬಲಗಳ ನಡುವೆ ದೇಶ ಮೊದಲು ಎಂಬ ಧ್ಯೇಯವಾಕ್ಯದೊಂದಿಗೆ ಬೌದ್ಧಿಕ ವಲಯವನ್ನು ಸೃಷ್ಟಿಸುವುದು, ವೃದ್ಧಿಸುವುದು ಸರಣಿಯ ಉದ್ದೇಶವಾಗಿದೆ ಎಂದರು.
ಹಿರಿಯ ಪತ್ರಕರ್ತ ಬೀರಣ್ಣ ನಾಯಕ ಮೊಗಟಾ ಉಪಸ್ಥಿತರಿದ್ದರು. ಪುಷ್ಪಾ ಮಾಳಕೊಪ್ಪ ವಂದೇ ಮಾತರಂ ಗೀತೆ ಹಾಡಿದರು. ಬಿಎಡ್ ಪ್ರಶಿಕ್ಷಣಾರ್ಥಿ ಪೂರ್ವಿ ಭಾವಗೀತೆ ಹಾಡಿದರು. ತಾಲೂಕು ಕಸಾಪ ಅಧ್ಯಕ್ಷ ವಿ. ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿದರು. ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ಡಿ.ಕೆ. ಗಾಂವ್ಕರ ನಿರ್ವಹಿಸಿ, ವಂದಿಸಿದರು. ವೇದಾ ಭಟ್ಟ ಸಂಗಡಿಗರು ರಾಷ್ಟ್ರಗೀತೆ ಹಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.