ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ‘ಕ್ರಿಯೇಟಿವ್ ಗುರುದೇವೋಭವ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಡಾ. ಹರೇಕಳ ಹಾಜಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾರ್ಕಳ : ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ‘ಕ್ರಿಯೇಟಿವ್ ಗುರುದೇವೋಭವ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಡಾ. ಹರೇಕಳ ಹಾಜಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಶಿಕ್ಷಣದಿಂದ ವಂಚಿತರಾಗಿದ್ದರೂ ತಮ್ಮೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸ್ವಗ್ರಾಮದಲ್ಲಿ ಶಾಲೆ ಆರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸಾಧನೆ ಮಾಡಿದ ಹರೇಕಳ ಹಾಜಬ್ಬ ಅವರನ್ನು ‘ಕ್ರಿಯೇಟಿವ್ ಗುರುದೇವೋಭವ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ, ತಾವು ಬಾಲ್ಯದಲ್ಲಿ ಎದುರಿಸಿದ ಕಷ್ಟಗಳು ಹಾಗೂ ತಮ್ಮೂರಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಪಡುತ್ತಿದ್ದ ಸಂಕಷ್ಟಗಳನ್ನು ಕಂಡು ಶಾಲೆ ಆರಂಭಿಸುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ರಿಯೇಟಿವ್ ಸಂಸ್ಥೆಯ ಸಹಸಂಸ್ಥಾಪಕ ಅಶ್ವತ್ ಎಸ್.ಎಲ್., ಕೇವಲ ವಿದ್ಯೆ ಕಲಿಸುವ ಶಿಕ್ಷಕರಷ್ಟೇ ಅಲ್ಲದೆ, ಜೀವನಕ್ಕೆ ಸನ್ಮಾರ್ಗ ತೋರಿಸಿ ಕೈಹಿಡಿದು ನಡೆಸಿದ ಪ್ರತಿಯೊಬ್ಬರೂ ಗುರು ಸ್ಥಾನಕ್ಕೆ ಅರ್ಹರು ಎಂದು ಹೇಳಿದರು.ಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಉಪನ್ಯಾಸಕರಾದ ವಿಶ್ವನಾಥ ಮಠ (ರಸಾಯನಶಾಸ್ತ್ರ), ಅಭಿಷೇಕ್ ಕುಮಾರ್ (ಭೌತಶಾಸ್ತ್ರ), ಶರತ್ ರೈ (ಭೌತಶಾಸ್ತ್ರ) ಹಾಗೂ ಆಶಾ ಕೆ.ಎಲ್. (ಜೀವಶಾಸ್ತ್ರ) ಅವರಿಗೆ ‘ಕ್ರಿಯೇಟಿವ್ ಗುರುದೇವೋಭವ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಎಲ್ಲ ಉಪನ್ಯಾಸಕರಿಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಹಸಂಸ್ಥಾಪಕ ಹಾಗೂ ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಬದುಕಿನ ಮಾರ್ಗ ತೋರಿಸಿದ ದಾರ್ಶನಿಕನನ್ನು ಗೌರವಿಸಿರುವುದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ ಎಂದರು.

ಕ್ರಿಯೇಟಿವ್ ಸಂಸ್ಥೆಯ ವತಿಯಿಂದ ಅಮ್ಮ ಚಾರಿಟೇಬಲ್ ಟ್ರಸ್ಟ್‌ಗೆ ಒಂದು ಲಕ್ಷ ರು. ಸಹಾಯಧನ ನೀಡಲಾಯಿತು.

ಸಂಸ್ಥೆಯ ಸಹಸಂಸ್ಥಾಪಕ ಡಾ. ಗಣನಾಥ ಬಿ. ಶೆಟ್ಟಿ, ಆದರ್ಶ ಎಂ.ಕೆ., ವಿಮಲ್ ರಾಜ್ ಹಾಗೂ ಗಣಪತಿ ಭಟ್ ಕೆ.ಎಸ್. ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ನಿರೂಪಿಸಿದರು.