ಪ್ರತಿಪಕ್ಷ ಬಿಜೆಪಿ ಕೇವಲ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಪಾದಯಾತ್ರೆಗಳನ್ನು ನಡೆಸುತ್ತಿದೆಯೇ ಹೊರತು ಸಾರ್ವಜನಿಕರ ಹಿತಾಸಕ್ತಿಗಾಗಿ ಅಲ್ಲ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ವಾಗ್ದಾಳಿ ನಡೆಸಿದ್ದಾರೆ.

ಗೋಣಿಕೊಪ್ಪ : ಪ್ರತಿಪಕ್ಷ ಬಿಜೆಪಿ ಕೇವಲ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಪಾದಯಾತ್ರೆಗಳನ್ನು ನಡೆಸುತ್ತಿದೆಯೇ ಹೊರತು ಸಾರ್ವಜನಿಕರ ಹಿತಾಸಕ್ತಿಗಾಗಿ ಅಲ್ಲ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ವಾಗ್ದಾಳಿ ನಡೆಸಿದ್ದಾರೆ.

ಗೋಣಿಕೊಪ್ಪದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಧಿವೇಶನದಲ್ಲಿ ಬರ, ಬೆಳೆ ಹಾನಿ ಹಾಗೂ ಇತರೆ ಗಂಭೀರ ಜನಪರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಿಜೆಪಿಯವರಿಗೆ ಆಸಕ್ತಿಯಿರಲಿಲ್ಲ. ನಾಗೇಂದ್ರ ಅವರು ಅಧಿವೇಶನದಲ್ಲಿ ಮಾತನಾಡಿದರೆ ಸತ್ಯ ಹೊರಬರುತ್ತದೆ ಎಂಬ ಭಯದಿಂದ ಬಿಜೆಪಿಯವರು ಪಾದಯಾತ್ರೆ ಆರಂಭಿಸಿದರು ಎಂದು ಲೇವಡಿ ಮಾಡಿದರು.

ಹಿಂದೆ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಕಾರಣ ಕಾಂಗ್ರೆಸ್‌ ಪಾದಯಾತ್ರೆ ನಡೆಸಿತ್ತು. ಪ್ರಸ್ತುತ ಅಂತಹ ಸಕಾಣಗಳಲ್ಲದೆ ಬಿಜೆಪಿ ಯಾತ್ರೆ ಮಾಡುತ್ತಿದೆ. ಬಿಜೆಪಿಗೆ ಕೇವಲ ಆರೋಪ ಮಾಡುವುದಷ್ಟೇ ಗೊತ್ತು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ಪಾತ್ರದ ಬಗ್ಗೆ ನ್ಯಾಯಾಲಯ ಯಾವುದೇ ತೀರ್ಪು ನೀಡಿಲ್ಲ. ವರ್ಗಾವಣೆಯಾಗಿದ್ದ ಸಂಪೂರ್ಣ ಹಣ ಈಗಾಗಲೇ ವಾಪಸ್ ಬಂದಿದೆ. ಪಾದಯಾತ್ರೆ ಮಾಡಿದ ತಕ್ಷಣವೇ ಗೆದ್ದುಬಿಡುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿ ನಾಯಕರಿದ್ದಾರೆ‌ ಎಂದರು.ನನ್ನ ಮೇಲೆಯೂ ಬಿಜೆಪಿ ನಾಯಕರು ಹಲವು ಬಾರಿ ಸುಳ್ಳು ಆರೋಪಗಳನ್ನು ಮಾಡಿದ್ದರು. ಡಿ.ಕೆ. ರವಿ ಮತ್ತು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ನಡೆದಾಗ ನಾನು ಗೃಹ ಸಚಿವ ಸ್ಥಾನದಿಂದ ನಿರ್ಗಮಿಸಿ ಆರು ತಿಂಗಳು ಕಳೆದಿತ್ತು. ಆದರೂ ನನ್ನ ಮೇಲೆಯೇ ಗೂಬೆ ಕೂರಿಸಿದರು. ಅಧಿಕಾರದಲ್ಲಿದ್ದುಕೊಂಡು ತನಿಖಾ ಸಂಸ್ಥೆ ಅಥವಾ ಪೊಲೀಸ್ ಠಾಣೆಗೆ ತೆರಳುವುದು ನೈತಿಕತೆಯಲ್ಲ ಎಂಬ ಕಾರಣಕ್ಕೆ ಹೈಕಮಾಂಡ್ ಬೇಡ ಎಂದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಸಿಐಡಿ, ಸಿಬಿಐ ತನಿಖೆಗಳು ನಡೆದು, ಕೊನೆಗೆ ಸುಪ್ರೀಂ ಕೋರ್ಟ್‌ವರೆಗೂ ಪ್ರಕರಣ ತಲುಪಿ ನನಗೆ ಎಲ್ಲ ಹಂತಗಳಲ್ಲೂ ಕ್ಲೀನ್ ಚಿಟ್ ಸಿಕ್ಕಿತು. ಆದರೆ, ಸತ್ಯ ಹೊರಬಂದ ಮೇಲೆ ಬಿಜೆಪಿಯಾಗಲಿ, ಮಾಧ್ಯಮಗಳಾಗಲಿ ಅದರ ಬಗ್ಗೆ ತುಟಿಪಿಟಕ್ ಎನ್ನಲಿಲ್ಲ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮ ನಡೆದಿತ್ತು ಎನ್ನಲಾದ ಸ್ಥಳ ಶುದ್ಧೀಕರಣ ವಿಚಾರದ ಕುರಿತು ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಾರ್ಜ್ , ಮಲ್ಲಿಕಾರ್ಜುನ ಖರ್ಗೆ ದೇಶ ಕಂಡ ಅತ್ಯಂತ ಹಿರಿಯ ಮತ್ತು ಗೌರವಾನ್ವಿತ ರಾಜಕಾರಣಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ಖರ್ಗೆ ಅವರಿಗೆ ನೇರ ಸವಾಲೆಸೆದಿದ್ದರು. ಪೂರ್ವನಿಯೋಜಿತ ತಂತ್ರ ರೂಪಿಸಿ ಅವರನ್ನು ಸೋಲಿಸಲಾಯಿತು. ಆದರೂ ಕಾಂಗ್ರೆಸ್ ಪಕ್ಷ ಅವರನ್ನು ಗೌರವದಿಂದ ರಾಜ್ಯಸಭೆಗೆ ಆಯ್ಕೆ ಮಾಡಿತು. ಈಗ ಸ್ಥಳ ಶುದ್ಧೀಕರಣದಂತಹ ಕೃತ್ಯಗಳ ಮೂಲಕ ಅವರಿಗೆ ಬಿಜೆಪಿ ಅಪಮಾನ ಮಾಡುತ್ತಿದೆ ಎಂದು ದೂರಿದರು.

ಬಿಜೆಪಿ ಯಾವಾಗಲೂ ಜಾತಿ ಮತ್ತು ಧರ್ಮಗಳನ್ನು ಒಡೆದು ರಾಜಕೀಯ ಲಾಭ ಪಡೆಯುತ್ತದೆ. ನಾನು ನನ್ನ ರಾಜಕೀಯ ಜೀವನವನ್ನು ಆರಂಭಿಸಿದ್ದೇ ಕೊಡಗಿನಿಂದ. ಅಂದಿನ ದಿನಗಳಲ್ಲಿ ಇಲ್ಲಿ ಚರ್ಚ್‌ಗಳೇ ಇರಲಿಲ್ಲ. ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ಹೋಗುತ್ತಿದ್ದೆವು, ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆವು. ಅಂದು ಯಾವುದೇ ಧಾರ್ಮಿಕ ಸಂಘರ್ಷಗಳಿರಲಿಲ್ಲ. ಆದರೆ ಬಿಜೆಪಿ ಇಂದು ಅಧಿಕಾರಕ್ಕಾಗಿ ಸಮಾಜವನ್ನು ವಿಭಜಿಸುತ್ತಿದೆ ಎಂದು ಹೇಳಿದರು.