ಯಲ್ಲಾಪುರ: ಸಮಾಜಕ್ಕೆ ನಾವೇನು ಕೊಡುಗೆ ನೀಡಿದ್ದೇವೆ ಎಂಬ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ನ. ೧೦ರಂದು ಪಟ್ಟಣದ ಶಕ್ತಿಗಣಪತಿ ದೇವಸ್ಥಾನದ ಆವಾರದಲ್ಲಿ ಯಲ್ಲಾಪುರದ ಹವ್ಯಕ ಪ್ರತಿಭೆಗಳಿಗಾಗಿ ಅಖಿಲ ಹವ್ಯಕ ಮಹಾಸಭಾ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸ್ಪರ್ಧೆ ಪ್ರತಿಬಿಂಬದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ, ಮಾತನಾಡಿದರು. ಸತ್ಕಾರ್ಯಕ್ಕೆ ದಾನ ಮಾಡುವ ಔದಾರ್ಯವನ್ನು ನಾವೆಷ್ಟು ಬೆಳೆಸಿಕೊಂಡಿದ್ದೇವೆ? ಉಳಿದೆಲ್ಲ ಸಮಾಜಕ್ಕೆ ಹೋಲಿಸಿದರೆ ನಮ್ಮ ಸಮಾಜದಲ್ಲಿ ಜನಸಂಖ್ಯೆ ತೀರಾ ಕಡಿಮೆ ಸಂಖ್ಯೆಯಲ್ಲಿದೆ. ಹೀಗೆಯೇ ಕಡಿಮೆಯಾಗುತ್ತ ಸಾಗಿದರೆ ಭವಿಷ್ಯದಲ್ಲಿ ಹವ್ಯಕರ ಸ್ಥಿತಿ ಏನಾದೀತು ಎಂಬುದನ್ನು ಪಾಲಕರು ಮತ್ತು ಮಕ್ಕಳು ಚಿಂತನೆ ಮಾಡಬೇಕು. ಈ ನಿಟ್ಟಿನಲ್ಲಿ ಮಹಾಸಭೆ ವಿಶ್ವ ಹವ್ಯಕ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಪ್ರತಿಯೊಬ್ಬ ಹವ್ಯಕರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿರುವುದು ಕರ್ತವ್ಯವಾಗಿದೆ. ಅಲ್ಲದೇ ತಂದೆ- ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮನಸ್ಥಿತಿಯೂ ಬದಲಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಮಹಾಸಭೆಯ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ನಮ್ಮ ಹಿರಿಯರು ಸ್ವಾತಂತ್ರ್ಯ ಪೂರ್ವದ ೧೯೪೩ರಲ್ಲಿ ಹವ್ಯಕ ಮಹಾಸಭೆಯನ್ನು ಸ್ಥಾಪಿಸಿದ್ದರು. ನಮ್ಮ ಸಮಾಜ ವಿಶಿಷ್ಟ ವಂಶವಾಹಿನಿಯಿಂದ ಬೆಳೆದ ಪರಂಪರೆಯಾಗಿದೆ. ಆದರೆ, ಮುಂಬರುವ ೫೦ ವರ್ಷಗಳಲ್ಲಿ ಇಂತಹ ಉತ್ತಮ ಸಮಾಜ ಬೆರಳೆಣಿಕೆಯಷ್ಟಾದರೂ ಇರಬಹುದೇ ಎಂಬ ಆತಂಕ ಉಂಟಾಗುತ್ತಿದೆ. ದ.ಕ., ಉ.ಕ., ಶಿವಮೊಗ್ಗ ಸೇರಿದಂತೆ ಹಲವು ಹವ್ಯಕರಿರುವ ಪ್ರದೇಶಗಳ ಜಮೀನನ್ನು ಮಾರಲಾಗುತ್ತಿದೆ. ಇದು ಇನ್ನೂ ಆತಂಕಕಾರಿಯಾಗಿದೆ. ಬೆಂಗಳೂರಿನಲ್ಲಿ ೮೫೦೦೦ ಹವ್ಯಕ ಕುಟುಂಬವನ್ನು ಗುರುತಿಸಲಾಗಿದೆ. ಈ ಕಾಲಘಟ್ಟದಲ್ಲಿ ನಮ್ಮ ಸಂಘಟನೆಯನ್ನು ಸಮಾಜದ ಒಳಿತಿಗಾಗಿ ಪರಿವರ್ತಿಸಿಕೊಳ್ಳದಿದ್ದರೆ ಭವಿಷ್ಯತ್ತು ನಮಗೆ ಅಪಾಯಕಾರಿಯಾಗುವ ಲಕ್ಷಣವಿದೆ ಎಂದರು.ಇನ್ನೋರ್ವ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು ಮಾತನಾಡಿ, ಡಿಸೆಂಬರ್ ೨೭, ೨೮, ೨೯ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿರುವ ೩ನೇ ವಿಶ್ವ ಹವ್ಯಕ ಸಮ್ಮೇಳನಕ್ಕೆ ಪ್ರತಿ ಹವ್ಯಕ ಕುಟುಂಬದವರೂ ಆಗಮಿಸಬೇಕು ಎಂದು ವಿನಂತಿಸಿದರು.ಹಿರಿಯ ಸಹಕಾರಿ ಧುರೀಣ ಉಮೇಶ ಭಾಗ್ವತ ಕಳಚೆ ಮಾತನಾಡಿದರು. ಗೋಸೇವಾ ವೈದ್ಯ ನಾರಾಯಣ ಹೆಗಡೆ ಗವೇಗುಳಿ, ನಿವೃತ್ತ ಅಧಿಕಾರಿ ಸಿ.ಜಿ. ಹೆಗಡೆ, ಮಹಾಸಭಾ ನಿರ್ದೇಶಕ ಪ್ರಶಾಂತ ಹೆಗಡೆ ವೇದಿಕೆಯಲ್ಲಿದ್ದರು. ಲಕ್ಷ್ಮೀಶಂಕರ ಭಟ್ಟ ಪ್ರಾರ್ಥಿಸಿದರು. ಮಹಾಸಭೆಯ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸುಬ್ರಾಯ ಭಟ್ಟ ನಿರ್ವಹಿಸಿದರು. ಸಂಚಾಲಕ ಅನಂತ ಗಾಂವ್ಕರ ವಂದಿಸಿದರು.