ನದಿ ಜೋಡಣೆ ಯೋಜನೆ ವಿರೋಧಿಸಿ ಹೆದ್ದಾರಿ ತಡೆ ಹೋರಾಟ ಯಶಸ್ವಿಗೊಳಿಸೋಣ: ಪ್ರಮೋದ ಹೆಗಡೆ

KannadaprabhaNewsNetwork |  
Published : Oct 24, 2026, 02:30 AM IST
ಫೋಟೋ ಅ.೨೩ ವೈ.ಎಲ್.ಪಿ. ೦೧ | Kannada Prabha

ಸಾರಾಂಶ

ಯೋಜನೆಯ ಬಗ್ಗೆ ಒಕ್ಕೊರಲ ವಿರೋಧವನ್ನು ಸರ್ಕಾರಕ್ಕೆ ತಲುಪಿಸಬೇಕು. ೩೦ ವರ್ಷಗಳ ಹಿಂದೆ ಬೇಡ್ತಿ ಯೋಜನೆಯನ್ನು ವಿರೋಧಿಸಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆದ ಹಾಗೆ ಈ ಹೋರಾಟ ನಡೆಯಬೇಕಾಗಿದೆ.

ಯಲ್ಲಾಪುರ: ಜಿಲ್ಲೆಯಲ್ಲಿ ಈವರೆಗೆ ಒಂಬತ್ತು ಚಳವಳಿ ನಡೆದಿದೆ. ಯಾವುದೂ ಯಶಸ್ವಿಯಾಗಿಲ್ಲ. ಮಾಗೋಡ ಜಲವಿದ್ಯುತ್ ಯೋಜನೆಯ ಹೋರಾಟ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಮೂವತ್ತು ಸಾವಿರ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆಯ ಪರಿಣಾಮ ಅಂದಿನ ಸರ್ಕಾರ ಯೋಜನೆಯನ್ನು ಕೈಬಿಟ್ಟ ಇತಿಹಾಸ ನಮ್ಮಲ್ಲಿದೆ. ಹಾಗಾಗಿ ನದಿ ತಿರುವು ಯೋಜನೆಯ ಹೋರಾಟ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲೇ ನಡೆಯುವುದರಿಂದ ಯಶಸ್ಸು ಸಾಧ್ಯ ಎಂದು ಹಿರಿಯ ಸಹಕಾರಿ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ಗುರುವಾರ ಪಟ್ಟಣದ ಅಡಿಕೆ ಭವನದಲ್ಲಿ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ನ. ೩ರಂದು ಪಟ್ಟಣದಲ್ಲಿ ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ತಡೆ ಆಂದೋಲನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಹೋರಾಟ ಯಶಸ್ವಿಯಾಗಬೇಕಾದರೆ ಜನಶಕ್ತಿ, ದೈವಿಶಕ್ತಿ ಅಗತ್ಯವಾಗಿದೆ ಎಂದ ಅವರು, ಜಗತ್ತಿನಲ್ಲಿ ಈಗಾಗಲೇ ಏಳು ನದಿಗಳ ನದಿ ತಿರುವು ಯೋಜನೆಯಿಂದ ಫಲವತ್ತಾದ ನದಿಯ ಪಾತ್ರ ಸಂಪೂರ್ಣ ಬತ್ತಿ ನಿಂತಿದೆ. ಕೆರೆಗಳೂ ಬತ್ತಿವೆ. ಇದು ನಮ್ಮ ಕಣ್ಮುಂದೆ ಇದೆ. ಅಲ್ಲದೇ ದಕ್ಷಿಣಕನ್ನಡದ ಎತ್ತಿನಹೊಳೆ ಯೋಜನೆ ವಿಫಲವಾಗಿರುವುದನ್ನು ನೆನಪು ಮಾಡಿಕೊಳ್ಳಬಹುದು. ಹೀಗೆ ಜನರ ತೆರಿಗೆ ಹಣ ಸಾವಿರಾರು ಕೋಟಿ ವ್ಯರ್ಥವಾಗುತ್ತದೆ. ಆದ್ದರಿಂದ ಈ ಯೋಜನೆಯ ವಿರುದ್ಧ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದರು.

ಹೋರಾಟ ಸಮಿತಿಯ ಸಂಚಾಲಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಪ್ರತಿ ಗ್ರಾಪಂಗಳಲ್ಲಿ ಸಭೆ ನಡೆಸಿ, ಹೋರಾಟದ ಕುರಿತು ಅರಿವು ಮೂಡಿಸಲಾಗುತ್ತಿದೆ. ೧೫ ಸಾವಿರಕ್ಕೂ ಹೆಚ್ಚು ಜನರು ಸೇರಬೇಕು. ಯೋಜನೆಯ ಬಗ್ಗೆ ಒಕ್ಕೊರಲ ವಿರೋಧವನ್ನು ಸರ್ಕಾರಕ್ಕೆ ತಲುಪಿಸಬೇಕು. ೩೦ ವರ್ಷಗಳ ಹಿಂದೆ ಬೇಡ್ತಿ ಯೋಜನೆಯನ್ನು ವಿರೋಧಿಸಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆದ ಹಾಗೆ ಈ ಹೋರಾಟ ನಡೆಯಬೇಕಾಗಿದೆ ಎಂದರು.

ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ನದಿ ಜೋಡಣೆಯ ವಿರುದ್ಧದ ಹೋರಾಟ ಸಾಮಾಜಿಕ ಚಳವಳಿಯಾಗಬೇಕು. ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಇದರಲ್ಲಿ ಪಾಲ್ಗೊಳ್ಳಬೇಕು. ಪಟ್ಟಣ ವ್ಯಾಪ್ತಿಯಲ್ಲಿ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುವಂತೆ ವಿನಂತಿಸಿದರು.

ಹೋರಾಟ ಸಮಿತಿಯ ಪ್ರಮುಖ ರಾಘವೇಂದ್ರ ಭಟ್ಟ ಹಾಸಣಗಿ, ನಗರಭಾಗಿ ಮಾತೃ ಮಂಡಳಿಯ ಅಧ್ಯಕ್ಷೆ ಆಶಾ ಬಗನಗದ್ದೆ, ಲೆಕ್ಕ ಪರಿಶೋಧಕಿ ಅಶ್ವಿನಿ ಹೆಗಡೆ, ಬಿಜೆಪಿ ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ, ಮಾತೃಮಂಡಳಿಯ ರಮಾ ದೀಕ್ಷಿತ, ವಿ.ಟಿ. ಹೆಗಡೆ ಇತರರು ಭಾಗವಹಿಸಿದ್ದರು. ಹೋರಾಟ ಸಮಿತಿಯ ಉಪಾಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಸ್ವಾಗತಿಸಿದರು. ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ನರಸಿಂಹ ಸಾತೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು.

ನಿರ್ಣಯ: ನ. ೩ರಂದು ಈ ಹೋರಾಟದ ಸಂದರ್ಭದಲ್ಲಿ ಪಟ್ಟಣದ ಎಲ್ಲ ಶಾಲಾ- ಕಾಲೇಜು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಪಡೆಯಲು ಎಲ್ಲ ವ್ಯಾಪಾರಸ್ಥರಿಗೆ ವಿನಂತಿಸಬೇಕೆಂದು ನಿರ್ಣಯಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಕೊರತೆ, ತೊಗರಿ ಬೆಳೆಗಾರ ಕಂಗಾಲು
ಚಿರತೆ ಉಗುರು ಸಂಗ್ರಹಿಸಿಟ್ಟ ಆರೋಪಿ ಬಂಧನ