ನಮ್ಮೊಳಗಿನ ದುರ್ಗುಣ ಬಲಿ ಕೊಡೋಣ:ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ

KannadaprabhaNewsNetwork |  
Published : May 01, 2024, 01:19 AM IST
ಧರ್ಮಸಭೆಯನ್ನು ಕನಕ ಗುರು ಪೀಠ ಹೊಸದುರ್ಗ ಶಾಖಾ  ಮಠದ  ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಉದ್ಘಾಟಿಸಿದರು | Kannada Prabha

ಸಾರಾಂಶ

ಶಿಕಾರಿಪುರ ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿನ ಶ್ರೀ ಮಾರಿಕಾಂಬಾ ದೇವಸ್ಥಾನದ ನೂತನ ಕಳಸಾರೋಹಣ ಉದ್ಘಾಟನಾ ಕಾರ್ಯಕ್ರಮದ ಧರ್ಮಸಭೆಯನ್ನು ಕನಕ ಗುರು ಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಉದ್ಘಾಟಿಸಿದರು

ಕನ್ನಡಪ್ರಭ ವಾರ್ತೆ ಶಿಕಾರಿಪುರ

ದೇವಸ್ಥಾನದಲ್ಲಿನ ಗಂಟೆಗಳಿಗಿಂತ ಹೆಚ್ಚಾಗಿ ಶಾಲೆ ಗಂಟೆಗಳು ಮೊಳಗಬೇಕು, ಅಕ್ಷರ ಜ್ಞಾನದಿಂದ ಮಾತ್ರ ಸಾಮಾಜಿಕ ಕ್ರಾಂತಿ ಸಾಧ್ಯ ಎಂದು ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಪಾದಿಸಿದ್ದು ಅವರ ಮಾತು ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದು ಕನಕ ಗುರು ಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.

ಮಂಗಳವಾರ ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ಶ್ರೀ ಮಾರಿಕಾಂಬ ದೇವಸ್ಥಾನದ ಕಳಸಾರೋಹಣ ನೆರವೇರಿಸಿ ನಂತರದಲ್ಲಿ ನಡೆದ ಧರ್ಮಸಭೆಯಲ್ಲಿ ಭಕ್ತವರ್ಗವನ್ನು ಆಶೀರ್ವದಿಸಿ ಸಂದೇಶ ನೀಡಿದರು.

ಮಾರಿಕಾಂಬಾ ದೇವಿಯು ಎಂದೂ ಬಲಿ ಕೇಳುವುದಿಲ್ಲ, ಅವಳಿಗೆ ಬಲಿ ಕೊಡಲೇಬೇಕು ಎಂದರೆ ನಮ್ಮೊಳಗಿನ ದುರ್ಗುಣ, ದುಶ್ಚಟ ದೇವರಿಗೆ ಬಲಿ ಕೊಡೋಣ ಎಂದರು. ಗ್ರಾಮಗಳಲ್ಲಿ ಮಾರಿ ಹಬ್ಬಗಳನ್ನು ದುಂದು ವೆಚ್ಚ ಮಾಡಿ ಸಾಲಗಾರರಾಗಬೇಡಿ. ದೇವಿಯು ಎಂದೂ ಬಲಿ ಕೇಳುವುದಿಲ್ಲ ಹಿಂದುಳಿದ ಸಮುದಾಯಗಳು ಸಾಲಮಾಡಿ, ಮಾರಿ ಹಬ್ಬ, ಬೀಗರೂಟ ಮಾಡಿ ಆರ್ಥಿಕವಾಗಿ ದುರ್ಬಲರಾಗುತ್ತಿದ್ದಾರೆ. ಅದರ ಬದಲಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಪ್ರಜ್ಞಾವಂತರನ್ನಾಗಿ ಮಾಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿ ಎಂದರು. ಹೆಣ್ಣು ಮಕ್ಕಳು ಎಂದು ಮೂಗು ಮುರಿಯದೆ ಅವರಿಗೂ ಉತ್ತಮ ಮತ್ತು ಉನ್ನತ ಶಿಕ್ಷಣ ಕೊಡಿಸಿ. ಇಂದಿನ ನಾಗರಿಕ ಸಮಾಜದಲ್ಲಿ ಹೆಣ್ಣು ಯಾವ ಗಂಡಿಗೂ ಕಡಿಮೆ ಇಲ್ಲ ಎಂಬಂತೆ ಸಾಧನೆ ಮಾಡಿ ತೋರಿಸಿದ್ದಾಳೆ ಎಂದರು.

ಪ್ರತಿಯೊಬ್ಬರಿಗೂ ಮತದಾನ ಕಡ್ಡಾಯಗೊಳಿಸಬೇಕು. ಇಲ್ಲದೆ ಹೋದಲ್ಲಿ ಮೂಲಭೂತ ಸೌಲಭ್ಯ ಬಂದ್ ಮಾಡಲಾಗುವುದು ಎಂದು ಚುನಾವಣಾ ಆಯೋಗ ಆದೇಶ ಮಾಡಿದಾಗ ಮಾತ್ರ ಶೇ.ನೂರರಷ್ಟು ಮತದಾನ ಆಗಲು ಸಾಧ್ಯ. ಪ್ರಜ್ಞಾವಂತರೂ, ವಿದ್ಯಾವಂತರಾದ ಬೆಂಗಳೂರಿನ ನಾಗರಿಕರು ಮತದಾನದಿಂದ ದೂರ ಉಳಿಯುತ್ತಿರುವುದು ಶೋಚನೀಯ ಎಂದರು.

ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಆಯುಕ್ತ ದಾನೇಶ್ ಮಾತನಾಡಿ, ನಾನು ಚಿಕ್ಕಂದಿನಲ್ಲಿ ಇದ್ದಾಗ ನಮ್ಮೂರ ದೇವಾಲಯಗಳಲ್ಲಿ ಹೇಳುತ್ತಿದ್ದ ರಾಮಾಯಣ, ಮಹಾಭಾರತ, ರೇವಣ ಸಿದ್ದರ ಕಥೆಗಳು ನಮಗೆ ಸ್ಪೂರ್ತಿದಾಯಕ ವಾಗಿದ್ದವು, ದೇವಸ್ಥಾನ ಕಟ್ಟಿ ಅಲ್ಲಿ ಕೇವಲ ಪೂಜೆ ಭಜನೆ ಮಾಡಿದರೆ ಸಾಲದು, ನಮ್ಮ ಕಾಯಕವು ಪೂಜೆ ರೀತಿ ಆಗಬೇಕು. ನಮ್ಮ ಸಂಸ್ಕಾರ ಸಂಸ್ಕೃತಿ ಉಳಿವಿಗಾಗಿ ಭಕ್ತಿ ಧ್ಯಾನಕ್ಕಾಗಿ ದೇವಾಲಯಗಳು ಬೇಕು. ನಿರ್ಮಲವಾದ ಪ್ರೀತಿ ಭಕ್ತಿ ಹೊಂದಿರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ದೇವಸ್ಥಾನ ಸಮಿತಿ ಅಧ್ಯಕ್ಷ ಗುತ್ಯಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತೋಶ್ರೀ ಚನ್ನಬಸಮ್ಮನವರು, ರಾಜ್ಯ ಹಾಲುಮತ ಮಹಾಸಭಾ ಉಪಾಧ್ಯಕ್ಷ ಡಾ.ಪ್ರಶಾಂತ್, ಕಸಾಪ ಅಧ್ಯಕ್ಷ ರಘು ಎಚ್ ಎಸ್, ತಾ.ಕಾ.ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್ ರಾಜು, ಗ್ರಾಮದ ಮುಖಂಡರಾದ ಶಿವಲಿಂಗಪ್ಪ, ದೊಡ್ಡಪ್ಪ ಎಲ್ಲೈಸಿ, ಆನಂದಪ್ಪ, ವರದೂರ್ ಶಿವಪ್ಪ, ಚಂದ್ರಪ್ಪ ತಿಮ್ಲಾಪುರ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಬಸವರಾಜಪ್ಪ, ಸತೀಶ್ ಗೌಡ್ರ, ಸುರೇಶಪ್ಪ, ಮಾರ್ತಾಂಡಪ್ಪ, ನಟರಾಜ್, ಗುಡ್ಡದಪ್ಪ, ಶಶಿಧರ್ ಉಡಗಣಿ, ಚೌಟಗಿ ಮೋಹನ್ ಮತ್ತಿತರರಿದ್ದರು..

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ