ಯಕ್ಷಗಾನದ ಪರವಾಗಿ ಸೇವೆ ನೀಡಲು ಶ್ರಮಿಸೋಣ: ಎಡನೀರು ಸ್ವಾಮೀಜಿ

KannadaprabhaNewsNetwork |  
Published : Jun 02, 2026, 03:00 AM IST
ಮಂಗಳೂರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ಪಟ್ಲ ಸಂಭ್ರಮ ಸಮಾರಂಭ ನಡೆಯಿತು | Kannada Prabha

ಸಾರಾಂಶ

ಪಟ್ಲ ಫೌಂಡೇಶನ್‌ ವತಿಯಿಂದ ದಾನಿಗಳ ಸಹಕಾರದಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಂಡ ಫಲಾನುಭವಿಗಳು ಇದರ ಋಣ ಸಂದಾಯ ಮಾಡುವ ಕೆಲಸ ಮಾಡಬೇಕಾಗಿದೆ. ಯಕ್ಷಗಾನವನ್ನು ಬೆಳೆಸುವ ನಿಟ್ಟಿನಲ್ಲಿ ಅದರ ಪರವಾಗಿ ಸೇವೆ ನೀಡಲು ನಾವೆಲ್ಲ ಶ್ರಮಿಸೋಣ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.

ಮಂಗಳೂರು: ಪಟ್ಲ ಫೌಂಡೇಶನ್‌ ವತಿಯಿಂದ ದಾನಿಗಳ ಸಹಕಾರದಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಂಡ ಫಲಾನುಭವಿಗಳು ಇದರ ಋಣ ಸಂದಾಯ ಮಾಡುವ ಕೆಲಸ ಮಾಡಬೇಕಾಗಿದೆ. ಯಕ್ಷಗಾನವನ್ನು ಬೆಳೆಸುವ ನಿಟ್ಟಿನಲ್ಲಿ ಅದರ ಪರವಾಗಿ ಸೇವೆ ನೀಡಲು ನಾವೆಲ್ಲ ಶ್ರಮಿಸೋಣ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಮಂಗಳೂರು ವತಿಯಿಂದ ಅಡ್ಯಾರ್‌ ಗಾರ್ಡನ್‌ನಲ್ಲಿ ಶನಿವಾರ ನಡೆದ ಪಟ್ಲ ಸಂಭ್ರಮ 2026 ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.ಒಂದು ಟ್ರಸ್ಟ್‌, ಸಂಘಟನೆ ಯಾವ ಮಟ್ಟದಲ್ಲಿ ಬೆಳೆಯಬಹುದು ಎಂಬುದನ್ನು ಪಟ್ಲ ಫೌಂಡೇಶನ್‌ ಮಾಡಿ ತೋರಿಸಿದೆ. ಕಲಾತ್ಮಕ, ಸಾಮಾಜಿಕವಾಗಿ ಪಟ್ಲ ಭಾಗವತರ ನೇತೃತ್ವದಲ್ಲಿ ಸಂಘಟನೆ ಬೆಳೆದಿದೆ ಎಂದರು.

ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಪಟ್ಲ ಎಂಬ ಹೆಸರಿನಲ್ಲಿ ಸಂಘಟನೆ ದೊಡ್ಡ ಮರವಾಗಿ ಬೆಳೆದು ಎಲ್ಲರಿಗೂ ನೆರಳು ನೀಡುತ್ತಿದೆ. ಮಾನವ ಸೇವೆಯಲ್ಲಿ ಮಾಧವ ಸೇವೆ ಎಂದು ಸೇವಾ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ನಮ್ಮ ಊರಿನ ಸಂಭ್ರಮ. ಜನರ ಮಸನಸ್ಸಿನಲ್ಲಿ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಎಂದರು.ಉದ್ಘಾಟನೆ ನೆರವೇರಿಸಿದ ಶಶಿಧರ ಶೆಟ್ಟಿ ಬರೋಡಾ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕಲಾವಿದರಿಗೆ ವಿಮೆ ಯೋಜನೆ ಮುಂತಾದ ಸೇವಾ ಕಾರ್ಯಕ್ರಮ ನಡೆಸಲಾಗುತ್ತಿರುವುದು ಹೆಮ್ಮೆಯ ಸಂಗತಿ. ದಾನ ಮಾಡುವ ಸಂಕಲ್ಪ ಮಾಡಿದರೆ ಸಾಕು ಅದಕ್ಕೆ ದೇವರ ಅನುಗ್ರಹ ಇರಲಿದೆ. ಇಂತಹ ಸಹಕಾರ ಇದ್ದರೆ ಇಂತಹ ಸಂಘಟನೆಗಳು ಬೆಳೆಯಲು ಸಾಧ್ಯ ಎಂದರು.ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಯಕ್ಷಗಾನಕ್ಕೆ ಸೆಲೆಬ್ರಿಟಿ ಟಚ್ ನೀಡಿದವರು ಪಟ್ಲ ಸತೀಶ್ ಶೆಟ್ರು. ಬ್ಯಾಕ್ ಟು ಊರು ಎಂಬ ನನ್ನ ಯೋಚನೆಯಂತೆ ಪಟ್ಲ ಫೌಂಡೇಶನ್ ಕೆಲಸ ಮಾಡುತ್ತಿದೆ. ಪಟ್ಲ ಫೌಂಡೇಶನ್ ವತಿಯಿಂದ ಮಂಗಳೂರಿನಲ್ಲಿ ಯಕ್ಷಗಾನ ಸೆಂಟರ್ ಆಗಲಿ. ಕೇಂದ್ರದಿಂದ ಅನುದಾನ ತರಿಸುವ, ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅದಕ್ಕೆ ಜಾಗ ಒದಗಿಸುವ ಕೆಲಸ ಮಾಡುವ ಭರವಸೆ ನೀಡಿದರು.ಯಕ್ಷಧ್ರುವ ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಆಳ್ವಾಸ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ್‌ ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ಮತ್ತು ಹಿರಿಯ ಯಕ್ಷಗಾನ ಭಾಗವತ ಮತ್ತು ವಿದ್ವಾಂಸ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಯಕ್ಷಧ್ರುವ ಪಟ್ಲ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜೇಶ್‌ಪ್ರಸಾದ್‌ ಐಎಎಸ್‌ ಅವರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಮೋಹನ್ ಆಳ್ವ, ಸತೀಶ್ ಪಟ್ಲ ಅವರು ಇವತ್ತು ಯಕ್ಷಗಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಮೂಲಕ ಸೆಲೆಬ್ರಿಟಿ ಆಗಿದ್ದಾರೆ. ಯಕ್ಷಗಾನದಲ್ಲಿ ಕ್ರಾಂತಿ ಮಾಡಿ ದೇಶ ವಿದೇಶದಲ್ಲಿ ಪೌಂಡೇಶನ್ ಮಾಡಿ ಇಡೀ ಜಗತ್ತಿಗೆ ಯಕ್ಷಗಾನ ತೋರಿಸುವ ಕೆಲಸ ಮಾಡುತ್ತಾ, ಸಾಮಾಜಿಕ ಸೇವೆ ಮಾಡುತ್ತಿದ್ದಾರೆ ಎಂದರು. ಡಾ.ಎಂ.ಪ್ರಭಾಕರ ಜೋಶಿ ಮತ್ತು ಕರ್ನೂರ್‌ ಮೋಹನ್‌ ಅಭಿನಂದನಾ ಭಾಷಣ ಮಾಡಿದರು.ಮುಂಬೈ ಹೇರಂಬ ಇಂಡಸ್ಟ್ರೀಸ್ ನ ಅಧ್ಯಕ್ಷ ಡಾ.ಸದಾಶಿವ ಶೆಟ್ಟಿ ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಚಂಡೀಗಡ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜೇಶ್ ಪ್ರಸಾದ್, ಪ್ರಮುಖರಾದ ದಿವಾಕರ ರಾವ್ ಕಟೀಲ್, ಪ್ರೊ.ಎಂ.ಎಲ್.ಸಾಮಗ, ರಘುರಾಮ ಶೆಟ್ಟಿ ಕನ್ಯಾನ, ಯೋಗೀಂದ್ರ ಭಟ್, ಕೆ.ಎಂ.ಶೆಟ್ಟಿ, ವೇಣುಗೋಪಾಲ ಶೆಟ್ಟಿ ಥಾಣೆ ಮುಂಬೈ, ಹಿರಿಯರಾದ ಮಹಾಬಲ ಶೆಟ್ಟಿ, ಲಲಿತಾ, ವಿಠಲ ಶೆಟ್ಟಿ ಶೇಡಿಗೋಡು, ಲೀಲಾಧರ ಶೆಟ್ಟಿ, ವಸಂತ ಶೆಟ್ಟಿ ಬೆಳ್ಳಾರೆ, ಅಶೋಕ್ ಶೆಟ್ಟಿ, ವಿಜಯ ಶೆಟ್ಟಿ, ಜಯರಾಮ್ ಶೇಕ್, ಕನ್ಯಾನ ಚಂದ್ರಹಾಸ ಶೆಟ್ಟಿ, ಭುವನೇಶ್ ಪಂಚ್ಚನಡ್ಕ, ಶಶಿಕಾಂತ ಶೆಟ್ಟಿ, ನಿರೂಪಮಾ ಶೆಟ್ಟಿ, ಹೇಮಂತ್ ರೈ, ಶಶಿಕಲಾ, ಪೂವಪ್ಪ ಶೆಟ್ಟಿ ಅಳಿಕೆ, ಪ್ರೀತಂ ರೈ, ಕರುಣಾಕರ ರೈ ದೇರ್ಲ, ಹರೀಂದ್ರ , ಸುರೇಂದ್ರ, ಶೇಖರ ಶೆಟ್ಟಿ, ಉಮೇಶ್ ಶೆಟ್ಟಿ, ಜಗದೀಶ್ ಶೆಟ್ಟಿ, ಅಜಿತ್ ಗುಜರಾತ್, ಪೂರ್ಣಿಮಾ, ಜಯಕರ ಶೆಟ್ಟಿ, ಪಿ.ಆರ್.ಶೆಟ್ಟಿ, ಪುರುಷೋತ್ತಮ ಶೆಟ್ಟಿ, ದಿವಾಕರ ಶೆಟ್ಟಿ, ನಿರಂಜನ್, ಗಣೇಶ್‌ ಶೆಟ್ಟಿ, ಸುನಿಲ್‌ ಶೆಟ್ಟಿ ಮತ್ತಿತರರು ಇದ್ದರು.

ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ ಪ್ರಾಸ್ತಾವಿಸಿ, ಸ್ವಾಗತಿಸಿದರು. ನವನೀತ ಶಟ್ಟಿ ಕದ್ರಿ ನಿರೂಪಿಸಿದರು.

ಸೇವಾ ಕಾರ್ಯಕ್ರಮ: ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಬೆಳಗ್ಗೆಯಿಂದ ಸಂಜೆವರೆಗೆ ನಡೆಯಿತು. ಕಲಾವಿದರಿಗೆ ಇನ್ಸೂರೆನ್ಸ್ ಯೋಜನೆ ನೋಂದಾಣಿ, ರಿನೀವಲ್‌ ಅವಕಾಶ ನೀಡಲಾಗಿತ್ತು. ಚೌಕಿಪೂಜೆ ಮತ್ತು ಅಬ್ಬರತಾಳ, ಭರತನಾಟ್ಯ ಪ್ರದರ್ಶನ, ಯೋಗ ಪ್ರದರ್ಶನ, ಮಹಿಳಾ ಯಕ್ಷಗಾನ, ಯಕ್ಷಗಾನ ಹಾಸ್ಯ ವೈಭವ ಕಾರ್ಯಕ್ರಮಗಳು ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೂ ಒತ್ತು; ದಯಾನಂದ ಪೈ
ಶಿಕ್ಷಕರನ್ನೇ ಆತ್ಮೀಯವಾಗಿ ಸ್ವಾಗತಿಸಿ ಹೊಸ ಶೈಕ್ಷಣಿಕ ವರ್ಷದ ಸಂಭ್ರಮ!