ಶಾಂತಿ, ಸಂಭ್ರಮದಿಂದ ಗಣೇಶನ ಸ್ವಾಗತಿಸೋಣ: ಕಮಿಷನರ್‌ ಭೂಷಣ್

KannadaprabhaNewsNetwork |  
Published : Sep 10, 2026, 01:45 AM IST
ಹುಬ್ಬಳ್ಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ ಮಹಾಮಂಡಳದ ನಿಯೋಗವು ಪೊಲೀಸ್ ಆಯುಕ್ತ ಭೂಷಣ್‌ ಬೋರಸೆ ಅವರನ್ನು ಭೇಟಿಯಾದರು. | Kannada Prabha

ಸಾರಾಂಶ

ಗಣೇಶೋತ್ಸವವು ಶಾಂತಿ, ಸೌಹಾರ್ದತೆ ಹಾಗೂ ವೈಭವದಿಂದ ನಡೆಯಬೇಕು. ಶ್ರೀಗಣೇಶನನ್ನು ಭಕ್ತಿ ಮತ್ತು ಸಡಗರದಿಂದ ಸ್ವಾಗತಿಸೋಣ. ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳ ಸಹಕಾರವೂ ಅತ್ಯಂತ ಅಗತ್ಯವಾಗಿದೆ.

ಹುಬ್ಬಳ್ಳಿ:

ಏಕತೆ ಹಾಗೂ ಸೌಹಾರ್ದತೆಯ ಮನೋಭಾವದಿಂದ ಗಣೇಶೋತ್ಸವ ಆಚರಿಸುವ ಮೂಲಕ ಹುಬ್ಬಳ್ಳಿ ನಾಡಿಗೆ ಮಾದರಿಯಾಗಿದೆ. ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ ಮೂಲಕ ಮಾನವೀಯ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸಿ, ನಗರದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹೇಳಿದರು.

ಗಣೇಶೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ ಮಹಾಮಂಡಳದ ನಿಯೋಗವು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಮಾತನಾಡಿದರು.

ಗಣೇಶೋತ್ಸವವು ಶಾಂತಿ, ಸೌಹಾರ್ದತೆ ಹಾಗೂ ವೈಭವದಿಂದ ನಡೆಯಬೇಕು. ಶ್ರೀಗಣೇಶನನ್ನು ಭಕ್ತಿ ಮತ್ತು ಸಡಗರದಿಂದ ಸ್ವಾಗತಿಸೋಣ. ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳ ಸಹಕಾರವೂ ಅತ್ಯಂತ ಅಗತ್ಯವಾಗಿದೆ ಎಂದರು.

ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಮಣ್ಣಿನಲ್ಲಿ ಅರಳಿದ ಸುಂದರ ಗಣೇಶ ಮೂರ್ತಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನದಾಸೋಹ, ವರ್ಣರಂಜಿತ ಮಂಟಪ ಹಾಗೂ ವಿದ್ಯುತ್ ಅಲಂಕಾರಗಳನ್ನು ವೀಕ್ಷಿಸಲು ಭಕ್ತರು ಹುಬ್ಬಳ್ಳಿಗೆ ಆಗಮಿಸುತ್ತಾರೆ. ಅವರಿಗೆ ಅಗತ್ಯ ಸೌಲಭ್ಯ ಹಾಗೂ ಸುರಕ್ಷತೆ ಕಲ್ಪಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರ ಅಗತ್ಯ ಎಂದರು.

ಸಭೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್, ವಿಸರ್ಜನಾ ಬಾವಿಗಳ ವ್ಯವಸ್ಥೆ, ಚೆನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆಯಿಂದ ಉಂಟಾಗಬಹುದಾದ ಅಡೆತಡೆ ನಿವಾರಣೆ, ಮೆರವಣಿಗೆ ಮಾರ್ಗ ಹಾಗೂ ಧ್ವನಿವರ್ಧಕ ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಸ್ಟೇಷನ್ ರೋಡ್, ಮರಾಠಾ ಗಲ್ಲಿ, ದುರ್ಗದ ಬೈಲ್, ಜವಳಿಸಾಲ, ಸರಾಫ ಗಟ್ಟಿ, ಶಿಂಪಿ ಗಲ್ಲಿ, ಬೋಸಪೇಟ, ದಾಜಿಬಾನ ಪೇಠ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಭಕ್ತರ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.

ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಉಪಾಧ್ಯಕ್ಷ ಅಲ್ತಾಫ ಕಿತ್ತೂರ ಹಾಗೂ ಶಾಂತರಾಜ ಪೋಳ, ಶ್ರೀನಿವಾಸ ಬೊಚಗೇರಿ, ಸಾಯಿನಾಥ ಹಿತ್ತಾಳಿ, ಈರಣ್ಣ ಪಾಳೆದ, ಸಿದ್ದಣ್ಣ ಅಂಗಡಿ, ಎಸ್‌.ಎಸ್‌. ಕಮಡೊಳ್ಳಿಶೆಟ್ಟರ್, ರಾಜು ಕರಕಣ್ಣವರ, ನಿವೃತ್ತ ಪ್ರಾಂಶುಪಾಲ ಜಿ.ಎಸ್‌. ಪಲ್ಲೇದ, ಮೃತ್ಯುಂಜಯ ಕಮಡೊಳ್ಳಿಶೆಟ್ಟರ್ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಮತಿ ಇಲ್ಲದೆ ನಡೆಸಿದ್ದ ಜಾನಪದ ವಿವಿ 8 ಪಿಜಿ ಕೋರ್ಸ್ ರದ್ದು!
ಕಬ್ಬಿಗೆ ಲಾಭದಾಯಕ ದರ ನಿಗದಿಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ: ರುದ್ರಪ್ಪ ಲಮಾಣಿ