ಕನ್ನಡಪ್ರಭ ವಾರ್ತೆ ಭಾರತೀನಗರ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ವತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರೂ ಕೂಡ ಮತದಾನ ಮಾಡಲು ಸಂವಿಧಾನ ನಮಗೆ ಮುಕ್ತ ಅವಕಾಶ ಕಲ್ಪಿಸಿದೆ. ಆದಾಗ್ಯೂ ಹಲವು ಕಾರಣಗಳಿಂದ ಮತದಾನದಿಂದ ದೂರ ಉಳಿಯುವ ನಾಗರಿಕರೂ ನಮ್ಮ ನಡುವೆ ಇದ್ದಾರೆ ಎಂದರು.
ಪ್ರತಿಯೊಬ್ಬರಿಗೂ ದೇಶದ ಸಂವಿಧಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಅದರಂತೆ ದೇಶದ ಪ್ರಜಾಪ್ರಭುತ್ವದ ಘನತೆಗಾಗಿ ಮತ ಚಲಾವಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮನವಿ ಮಾಡಿದರು.18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಅಂಗವಿಕಲರಿಗೂ ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. 85 ವರ್ಷ ವಯಸ್ಸು ಮೇಲ್ಪಟ್ಟ ಹಿರಿಯ ನಾಗರಿಕರೂ ನೋಂದಣಿ ಮಾಡಿಕೊಂಡು ಮನೆಯಿಂದಲೇ ಮತ ಚಲಾವಣೆ ಮಾಡಬಹುದು ಎಂದರು.
ಪ್ರಾಂಶುಪಾಲ ಡಾ.ಬರಗೂರಪ್ಪ ಮಾತನಾಡಿ, ಮತ ಚಲಾವಣೆ ಮಾಡಲು ಯಾವುದೇ ಆಮಿಷಗಳಿಗೆ ಒಳಗಾಗುವುದು ಬೇಡ. ಜಾತಿ, ವರ್ಗ, ಧರ್ಮ, ಲಿಂಗ ತಾರತಮ್ಯ ಮಾಡದೇ, ಹಣದ ರೂಪದ ಹಾಗೂ ವಸ್ತು ರೂಪದ ಆಮಿಷಗಳಿಗೆ ಬಲಿಯಾಗದೇ ಮತ ಚಲಾವಣೆ ಮಾಡಬೇಕು ಎಂದರು.