ಮಹಿಳೆಯರಿಗೆ ಕಾನೂನು ಬಗ್ಗೆ ಅರಿವಿರಲಿ

KannadaprabhaNewsNetwork |  
Published : Oct 06, 2024, 01:18 AM IST
ಬಳ್ಳಾರಿ ಜಿಪಂ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಾಗಾರವನ್ನು ನ್ಯಾ.ಸಿದ್ಧಲಿಂಗ ಪ್ರಭು ಉದ್ಘಾಟಿಸಿದರು. | Kannada Prabha

ಸಾರಾಂಶ

ಒಂದೆಡೆ ಸಂತಸವಾದರೆ, ಮತ್ತೊಂದೆಡೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಪ್ರಕರಣಗಳು ಕಂಡು ಬರುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.

ಬಳ್ಳಾರಿ: ಮಹಿಳೆಯರು ಸಮಾಜದಲ್ಲಿ ಸುಸ್ಥಿರ ಜೀವನ ನಡೆಸಲು ಅವರ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಸಂವಿಧಾನಾತ್ಮಕ ಬದ್ಧವಾಗಿರುವ ಕಾನೂನು-ಕಾಯ್ದೆಗಳ ಕುರಿತು ಅರಿವು ಹೊಂದಬೇಕು ಎಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಹೇಳಿದರು.

ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೋಟೆ ಪ್ರದೇಶದ ಜಿಪಂ ಅಬ್ದುಲ್ ನಜೀರಸಾಬ್ ಸಭಾಂಗಣದಲ್ಲಿ ವಿಧಾನ್ ಸೇ ಸಮಾಧಾನ್ ಅಭಿಯಾನ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸಮಾನತೆ ಸಾಧಿಸುತ್ತಿದೆ. ಒಂದೆಡೆ ಸಂತಸವಾದರೆ, ಮತ್ತೊಂದೆಡೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಪ್ರಕರಣಗಳು ಕಂಡು ಬರುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪೋಷಕರು ತಮ್ಮ ಮಕ್ಕಳು ತಪ್ಪು ಹಾದಿ ಹಿಡಿಯದಂತೆ ನೋಡಿಕೊಂಡು, ಅವರ ಚಲನ-ವಲನ ಬಗ್ಗೆ ಗಮನಹರಿಸಬೇಕು. ವಿವಾಹ ವಿಷಯ ಪ್ರಸ್ತಾವನೆ ಬಂದಾಗ ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ಮದುವೆ ಮಾಡಿದಾಗ, ಎರಡು ಸಂಬಂಧಗಳ ನಡುವೆ ಬಿರುಕು ಮೂಡುವುದಿಲ್ಲ. ಇದರಿಂದ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಕಲಹ ಉದ್ಭವವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸಂವಿಧಾನದಡಿ ಮಹಿಳೆಯರ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಇರುವ ಕಾನೂನುಗಳ ಕುರಿತ ಜಾಗೃತಿ ಮತ್ತು ಸರ್ಕಾರವು ಮಹಿಳೆಯರ ಏಳಿಗೆಗಾಗಿ ರೂಪಿಸಿರುವ ಯೋಜನೆಗಳು ಸಕಾಲಕ್ಕೆ ಅರ್ಹ ಮಹಿಳೆಯರಿಗೆ ತಲುಪಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್.ಎನ್ ಹೊಸಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ಕಾನೂನಿನ ಜ್ಞಾನ ಪಡೆದುಕೊಂಡು ಸಣ್ಣಪುಟ್ಟ ವಿವಾದಗಳಿಗೆ ಕೋರ್ಟ್-ಕಚೇರಿ, ಪೊಲೀಸ್ ಠಾಣೆಗಳಿಗೆ ವ್ಯಾಜ್ಯಗಳನ್ನು ಕೊಂಡೊಯ್ಯದೇ ಅನ್ಯೋನ್ಯವಾಗಿ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ ಪ್ರವೃತ್ತರಾಗಿ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಕಾನೂನಿನ ಸಲಹೆ ಮತ್ತು ಸುರಕ್ಷತೆ ಕುರಿತು ಪ್ರತಿಯೊಬ್ಬರಿಗೂ ತಿಳಿಸಿಕೊಡುವ ಕಾರ್ಯಮಾಡಬೇಕು ಎಂದು ಸೂಚಿಸಿದರು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ನ್ಯಾಯಾಲಯ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ವಿಧಾನ್ ಸೇ ಸಮಾಧಾನ್ ಕಾರ್ಯಕ್ರಮ ಏರ್ಪಡಿಸಿ ಮಹಿಳೆಯರಿಗೆ ಕಾನೂನು ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಹಾಗೂ ವಕೀಲರಾದ ವಿಜಯಲಕ್ಷ್ಮೀ ಮೈದೂರು ಮತ್ತು ವಕೀಲರಾದ ಶಿವಲೀಲಾ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ರಾಮ್‌ಬ್ರಹ್ಮಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್.ಕೆ.ಹೆಚ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ ಎಂ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಬಳ್ಳಾರಿ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆ ನಾಗಪ್ಪ ಸೇರಿದಂತೆ ಜಿಲ್ಲಾ ನ್ಯಾಯಾಲಯದ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಘ-ಸಂಸ್ಥೆಯ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬಳ್ಳಾರಿ ಜಿಪಂ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಾಗಾರವನ್ನು ನ್ಯಾ.ಸಿದ್ಧಲಿಂಗ ಪ್ರಭು ಉದ್ಘಾಟಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ