ಮಹಿಳೆಯರು ಉದ್ಯೋಗದಾತೆಯರಾಗಿ ಹೊರಹೊಮ್ಮಲಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

KannadaprabhaNewsNetwork |  
Published : Jul 08, 2024, 12:30 AM IST
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತರಬೇತಿ ಪಡೆದ ಮಹಿಳೆಯರಿಗೆ ಹಾಲಿಗೆ ಯಂತ್ರ ವಿತರಿಸಿದರು. | Kannada Prabha

ಸಾರಾಂಶ

ದೊಡ್ಡ ಪ್ರಮಾಣದಲ್ಲಿ ಭಾರತ ಬಟ್ಟೆಗಳನ್ನು ಉತ್ಪಾದನೆ ಮಾಡಿ, ವಿದೇಶಗಳಿಗೆ ರಪ್ತು ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಹಿಳೆಯರು ಶ್ರದ್ಧೆಯಿಂದ ಕಲಿತು ಉದ್ಯಮ ಆರಂಭಿಸಲಿ. ಬರಿ ಉದ್ಯೋಗ ಕೇಳುವವರಂತಾಗದೇ ನೀವೇ ಉದ್ಯೋಗದಾತೆಯರಾಗಿ ಬೆಳೆಯುವ ಸಾಮರ್ಥ್ಯ ಬೆಳೆಸಿಕೊಳ್ಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅವರು ಇಲ್ಲಿನ ಕುಸಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಭಾನುವಾರ ಗ್ರಾಮ ವಿಕಾಸ ಫೌಂಡೇಷನ್ ಹಾಗೂ ಇತರ ಕಂಪನಿಗಳ ಸಿಎಸ್ಆರ್ ಅನುದಾನದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ಪ್ರಮಾಣಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ, ಮಹಿಳೆಯರಿಗೆ ಹೊಲಿಗೆಯಂತ್ರ ವಿತರಿಸಿ ಮಾತನಾಡಿದರು.

ದೊಡ್ಡ ಪ್ರಮಾಣದಲ್ಲಿ ಭಾರತ ಬಟ್ಟೆಗಳನ್ನು ಉತ್ಪಾದನೆ ಮಾಡಿ, ವಿದೇಶಗಳಿಗೆ ರಪ್ತು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಹೊಲಿಗೆ ಕಲಿತ ಮಹಿಳೆಯರಿಗೆ ದೊಡ್ಡ ಅವಕಾಶ ಸಿಗಲಿದೆ. ಬಟ್ಟೆ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿಯೇ 4ನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ 2-3ನೇ ಸ್ಥಾನಕ್ಕೆ ಬರಲಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಯಿಂದ ಗಾರ್ಮೆಂಟ್‌ನಲ್ಲಿ ದೊಡ್ಡ ಅವಕಾಶಗಳು ತೆರೆದುಕೊಳ್ಳುತ್ತಿವೆ. ಹೊಲಿಗೆಗೆ ಬೇಕಾದ ಮೂಲ ತರಬೇತಿ ನಾವು ನೀಡುತ್ತೇವೆ. ಹೆಚ್ಚಿನ ತರಬೇತಿ ನೀವು ಪಡೆಯಬೇಕು ಎಂದರು.

ಧಾರವಾಡಕ್ಕೆ 2-3 ಗಾರ್ಮೆಂಟ್ ಕಂಪನಿಗಳು ಬರಲು ಉತ್ಸುಕತೆ ತೋರಿವೆ. ನೀವು ಸಹ ಗಾರ್ಮೆಂಟ್ ಕಂಪನಿ ಮಾಲೀಕರಾಗಲು ಮುಂದಾಗಬೇಕು. ಅದಕ್ಕೆ ಪರಿಶ್ರಮ ಮತ್ತು ಕೌಶಲ ಅಗತ್ಯ. ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಪಡೆದು, ನೀವೇ ಉದ್ಯೋಗದಾತರಾಗಬೇಕು‌ ಎಂದರು.

ಅನೇಕ ವರ್ಷಗಳ ಹಿಂದೆ ಮಹಿಳೆಯರು ಉದ್ಯೋಗ ನೀಡುವಂತೆ ವಿನಂತಿಸಿದ್ದರು. ಅವರಲ್ಲಿ ಶಿಕ್ಷಣ ಹಾಗೂ ಕೌಶಲದ ಕೊರತೆ ಎದ್ದು ಕಂಡಿತ್ತು. ಗ್ರಾಮ ವಿಕಾಸ ಫೌಂಡೇಷನ್ ಅಡಿಯಲ್ಲಿ 14 ಕೇಂದ್ರಗಳಲ್ಲಿ 11,040 ಮಂದಿಗೆ ತರಬೇತಿ ನೀಡಲಾಗಿದೆ. ಅವರಲ್ಲಿ 3,695 ಮಂದಿ ವಿವಿಧೆಡೆ ಉದ್ಯೋಗ ಪಡೆದಿದ್ದಾರೆ. 3,700 ಮಂದಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಗಿದೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಮಹಿಳೆಯರು ಇಂದು ಸ್ವಾವಲಂಬಿಯಾಗಿ ಬದುಕು ನಡೆಸುತ್ತಿದ್ದಾರೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮೊದಲ ಹಂತದಲ್ಲಿ 2004 ಹೊಲಿಗೆ ಯಂತ್ರ ವಿತರಿಸಿ, ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದ್ದಾರೆ ಎಂದರು.

ಕಂಪ್ಯೂಟರ್ ಕಲಿಕೆಗೆ ಒತ್ತು ನೀಡಬೇಕು ಎನ್ನುವ ಬೇಡಿಕೆ ಕೇಳಿಬರುತ್ತಿದೆ. ಸಚಿವರ ಜತೆ ಸೇರಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಮಹಿಳೆಯರಿಗೆ ಕಂಪ್ಯೂಟರ್ ಕಲಿಕೆ ತರಬೇತಿ ನೀಡಲು ಯೋಜನೆ ರೂಪಿಸಲಾಗುವುದು. ಅಲ್ಲದೇ ನನ್ನ ಕ್ಷೇತ್ರದಲ್ಲಿನ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳುವಂತೆ ಸಚಿವರ ಬಳಿ ಮನವಿ ಮಾಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜ್ಯೋತಿ ಜೋಶಿ, ಗ್ರಾಮ ವಿಕಾಸ ಫೌಂಡೇಷನ್‌ನ ಸಂಯೋಜಕ ಜಗದೀಶ ನಾಯಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಹೊಲಿಗೆ ಯಂತ್ರ ವಿತರಣೆ

ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಫೌಂಡೇಷನ್, ಜೆಕೆ ಸಿಮೆಂಟ್, ರ್‍ಯಾಮ್ಕೋ ಸಿಮೆಂಟ್, ಓರಿಯಂಟ್ ಸಿಮೆಂಟ್, ಮೈ ಹೋಮ್ ಗ್ರುಪ್, ಎನ್ಎಲ್‌ಸಿ ಇಂಡಿಯಾ ಲಿ. ಕಂಪನಿಯ ಸಿಎಸ್‌ಆರ್ ನಿಧಿಯಿಂದ ಮಹಿಳೆಯರಿಗೆ ನೀಡಲಾಗುತ್ತಿರುವ ಹೊಲಿಗೆ ಯಂತ್ರಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿತರಿಸಿದರು. ಉಚಿತವಾಗಿ ಹೊಲಿಗೆ ತರಬೇತಿ ಪಡೆದು, ಹೊಲಿಗೆ ಯಂತ್ರ ಪಡೆದ ಹಲವು ಮಹಿಳೆಯರು ಅನಿಸಿಕೆ ಹಂಚಿಕೊಂಡರು. ತರಬೇತಿ ಅವಧಿಯಲ್ಲಿ ಮಹಿಳೆಯರು ಸಿದ್ಧಪಡಿಸಿದ ಅಂಗನವಾಡಿ ಮಕ್ಕಳ ಬಟ್ಟೆಯನ್ನು ಪ್ರದರ್ಶಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ