ಮಹಿಳೆಯರು ಸಾಮಾಜಿಕವಾಗಿ ತೊಡಗಿಕೊಳ್ಳಲಿ: ಚಂದ್ರಶೇಖರ

KannadaprabhaNewsNetwork | Published : Apr 1, 2024 12:49 AM

ಸಾರಾಂಶ

ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಇನ್ನು ಹೆಚ್ಚು ಹೆಚ್ಚು ಸಾಮಾಜಿಕವಾಗಿ ತೊಡಗಿಕೊಳ್ಳಬೇಕಾಗಿದೆ.

ಉತ್ತರ ಕರ್ನಾಟಕದ ಮಹಿಳಾ ನ್ಯಾಯವಾದಿಗಳ ಸಮ್ಮೇಳನ ಉದ್ಘಾಟಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ

ಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಇನ್ನು ಹೆಚ್ಚು ಹೆಚ್ಚು ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕಾಗಿದೆ. ಸಂಪೂರ್ಣ ಸಬಲೀಕರಣವಾಗುವ ಅಗತ್ಯವೂ ಇದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಸಿ. ಹೇಳಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಹಿಳಾ ನ್ಯಾಯವಾದಿಗಳ ಒಕ್ಕೂಟ, ಜಿಲ್ಲಾ ನ್ಯಾಯವಾದಿಗಳ ಸಂಘ, ಉತ್ತರ ಕರ್ನಾಟಕ ನ್ಯಾಯವಾದಿ ಸಂಘಗಳ ಸಹಯೋಗದಲ್ಲಿ ನಡೆದ ಉತ್ತರ ಕರ್ನಾಟಕದ ಮಹಿಳಾ ನ್ಯಾಯವಾದಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗಾಗಿ ಕಾನೂನಿನಲ್ಲಿ ಹೆಚ್ಚು ಹೆಚ್ಚು ಅವಕಾಶಗಳಿವೆ. ಉದ್ಯೋಗದಲ್ಲಿಯೂ ಅವಕಾಶ ಇವೆ. ಹೀಗಾಗಿ, ಈ ಕುರಿತು ಇಂಥ ಸಮ್ಮೇಳನಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಮಹಿಳಾ ನ್ಯಾಯವಾದಿ ಸಂಧ್ಯಾ ಮಾದಿನೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕೊಪ್ಪಳದಲ್ಲಿ ಬಹುವರ್ಷಗಳ ಬಳಿಕ ಮಹಿಳಾ ನ್ಯಾಯವಾದಿಗಳ ಸಮ್ಮೇಳನ ನಡೆದಿದೆ. ಇದೊಂದು ಸಂತೋಷದ ವಿಷಯ. ಈ ಭಾಗದಲ್ಲಿ ಉತ್ತರ ಕರ್ನಾಟಕದ ಮಹಿಳಾ ನ್ಯಾಯವಾದಿಗಳ ಸಮ್ಮೇಳನ ಮಾಡಬೇಕೆಂಬ ಹೆಬ್ಬಯಕೆಯು ಈಡೇರಿದೆ. ಇಲ್ಲಿ ಹಲವು ವಿಚಾರಗಳು ಮಂಡನೆಯಾಗಲಿವೆ ಎಂದರು.

ಮಹಿಳೆಯರು ಸಂಘಟನೆಯಾಗುವ ಮೂಲಕ ಸಮಾಜದಲ್ಲಿ ಸಿಗಬೇಕಾದ ಸೂಕ್ತ ಸ್ಥಾನಮಾನವನ್ನು ಪಡೆದುಕೊಳ್ಳುವ ಅಗತ್ಯವಿದೆ. ಹಾಗೆಯೇ ಸಮಾಜದಲ್ಲಿ ಇರುವ ಮಹಿಳಾ ವಿರೋಧಿ ಧೋರಣೆ ವಿರುದ್ಧವೂ ಶಕ್ತಿಯುತವಾಗಿರುವ ಸಂಘಟನೆಯ ಅಗತ್ಯವಿದೆ ಎಂದರು.

ಅಂತಾರಾಷ್ಟ್ರೀಯ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಶೀಲಾ ಅನೀಸ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಗೌರಮ್ಮ ಪಾಟೀಲ್, ಎಲ್.ಜೆ. ಭವಾನಿ, ಸರಸ್ವತಿ ದೇವಿ, ಹರೀಶ್ ಕುಮಾರ, ಆದಿತ್ಯ ಕುಮಾರ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ಹಿರಿಯ ವಕೀಲರಾದ ಆಸಿಫ್ ಅಲಿ, ಆರ್.ಬಿ. ಪಾನಘಂಟಿ ಸೇರಿದಂತೆ ಪ್ರಮುಖರಿದ್ದರು.

Share this article